ಸಾರಾಂಶ
ಮುಡಾ ಹಗರಣ - ಸಿಬಿಐನಲ್ಲಿ ಕೇಸ್ ನಡೆಯುತ್ತಿದೆ. ಸಿಬಿಐನಿಂದ ಕಾನೂನಿನ ದೃಷ್ಟಿಯಲ್ಲಿ ಏನು ನಿರ್ಣಯ ಮಾಡ್ತಾರೆ ಮಾಡಲಿ. ಲೋಕಾಯುಕ್ತರ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರ : ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ವಿರುದ್ಧ ಮೈಸೂರಿನ ಮುಡಾ ಹಗರಣದ ಕುರಿತು ಕೇಸ್ ನಡೆದಿತ್ತು. ಇದೀಗ ಲೋಕಾಯುಕ್ತರು ಕ್ಲೀನ್ ಚೀಟ್ ನೀಡಿದ್ದಾರೆ ಎಂಬ ಸುದ್ದಿ ಗೊತ್ತಾಗಿದೆ. ಲೋಕಾಯುಕ್ತರು ಕ್ಲೀನ್ ಚೀಟ್ ಕೊಟ್ಟಿರಬಹುದು. ಆದರೆ ಸಿಬಿಐನಲ್ಲಿ ಕೇಸ್ ನಡೆಯುತ್ತಿದೆ. ಸಿಬಿಐನಿಂದ ಕಾನೂನಿನ ದೃಷ್ಟಿಯಲ್ಲಿ ಏನು ನಿರ್ಣಯ ಮಾಡ್ತಾರೆ ಮಾಡಲಿ. ಲೋಕಾಯುಕ್ತರ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಮುಡಾ ಹಗರಣ ಕೇಸ್‌ಗೆ ಸಂಬಂಧಿಸಿದಂತೆ ಲೋಕಾಯುಕ್ತರಿಂದ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್‌ಚಿಟ್ ನೀಡಿದ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಆರೋಪ ಮಾಡುವುದೇ ಅವರ ಕೆಲಸ. ನಾವೇನು ಮಾಡಲು ಆಗುತ್ತದೆ? ಈಗ ಇದು (ಲೋಕಾಯುಕ್ತ) ರಾಜ್ಯ ಸರ್ಕಾರದ್ದಲ್ಲವಾ? ಇದನ್ನು ತಾವು ಮಾಡಿಕೊಂಡಿದ್ದಾರೆ. ಸಿಬಿಐ ತನಿಖೆ ನಡೆದಿದೆ ನಡೆಯಲಿ.
ಸಿಬಿಐನಲ್ಲಿ ದೋಷಮುಕ್ತ ಆದರೆ ಮಾತ್ರ ದೋಷಮುಕ್ತ ಎಂದರು.ಗೃಹಜ್ಯೋತಿ ಯೋಜನೆ ಎಲ್ಲರಿಗೂ ಇಲ್ಲ ಎಂದು ಸಚಿವ ಜಾರ್ಜ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಲ್ಲೇ ಕಾಂಟ್ರವರ್ಸಿ ಇದೆ. ಸಿಎಂ ಒಂದು ರೀತಿ ಹೇಳುವುದು, ಸಚಿವರು ಒಂದು ರೀತಿ ಹೇಳುವುದು ಮಾಡುತ್ತಿದ್ದಾರೆ.
ಹಿಂದೆ ಸಚಿವರು ಎಲ್ಲರಿಗೂ ಫ್ರೀ ಎಂದರು. ಈಗ 100, 200 ಯುನಿಟ್ ಕೊಡುತ್ತೇವೆ ಅಂತಾರೆ. ಇದನ್ನು ನೋಡಿದರೆ ಮಂತ್ರಿಗಳ ಮೇಲೆ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲದಂತಾಗಿದೆ. ಜನರಿಗೆ ಮೋಸ ಮಾಡಿ ಓಟು ಪಡೆದು, ಈಗ ಆರಾಮಾಗಿ ಕುಳಿತಿದ್ದಾರೆ. ಈಗೇನು ಕೊಟ್ಟಿದ್ದಾರೋ ಇನ್ನು ಸ್ವಲ್ಪ ದಿನದಲ್ಲಿ ಅವು (ಗ್ಯಾರಂಟಿ ಯೋಜನೆಗಳು) ಇಲ್ಲಾ ಎನ್ನುತ್ತಾರೆ ಅಷ್ಟೆ ಎಂದರು.ಸಂಬಳ ಕೊಡಲು ಹಣವಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಹಣ ತೆಗೆದುಕೊಂಡಿದ್ದಾರೆ.
ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೇನಿದೆ? ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಬರೀ ಇದನ್ನೇ ಮಾಡಿಕೊಂಡು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಇವರ ಗ್ಯಾರಂಟಿ ಯೋಜನೆಗಳೇನು ಕೊನೆಯವರೆಗೆ ಇರುವುದಿಲ್ಲ. ಹಂತ ಹಂತವಾಗಿ ಇವೆಲ್ಲ ಅಂತ್ಯ (ಕ್ಲೋಸ್) ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಇವರು ಕ್ಲೋಸ್ ಮಾಡೋದು ಗ್ಯಾರಂಟಿ. ಕ್ಲೋಸ್ ಮಾಡುವ ಸ್ಪಷ್ಟ ಮುನ್ಸೂಚನೆ ಇದೆ ಎಂದರು.