ಕನ್ನಡಪ್ರಭ ವಾರ್ತೆ ಬೆಳಗಾವಿ

ಭ್ರಷ್ಟಾಚಾರ ಆರೋಪದಡಿ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯ್ ಸಿಂಗ್ ರಜಪೂತ ಅವರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದರು.

ನಗರದ ಆಂಜನೇಯ ನಗರದ ನಿವಾಸ ಸೇರಿದಂತೆ ಅಥಣಿ ಹಾಗೂ ಹುಕ್ಕೇರಿ ಪಟ್ಟಣಗಳಲ್ಲಿನ ಆಸ್ತಿಗಳ ಮೇಲೆ ನಡೆದ ಶೋಧ ಕಾರ್ಯದಲ್ಲಿ ಅಧಿಕಾರಿಗಳಿಗೆ ಅಚ್ಚರಿಯ ಮಾಹಿತಿಗಳು ಲಭಿಸಿವೆ. ಪರಿಶೀಲನೆ ವೇಳೆ ಒಂದು ಕೆಜಿಗೂ ಅಧಿಕ ಚಿನ್ನಾಭರಣ ಪತ್ತೆಯಾಗಿದ್ದು, ಬ್ಯಾಂಕ್ ಖಾತೆಗಳಲ್ಲಿ ಸುಮಾರು ₹ 2 ಕೋಟಿ ಠೇವಣಿ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಬೆಳಗಾವಿ ನಗರದಲ್ಲೇ ಅಕ್ಕಪಕ್ಕದಲ್ಲಿರುವ ಮೂರು ಮನೆಗಳನ್ನು ಹೊಂದಿರುವುದು ಅಧಿಕಾರಿಯ ಆಸ್ತಿ ಪ್ರಮಾಣದ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡಿದರು. ಡಿವೈಎಸ್ಪಿ ಬಿ.ಎಸ್.ಪಾಟೀಲ್ ಹಾಗೂ ಭರತ್ ರೆಡ್ಡಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಇನ್ನು ಮುಂದುವರಿದಿದೆ. ಅಲ್ಲದೇ, ಹೆಚ್ಚಿನ ದಾಖಲೆಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ