ಕನ್ನಡಪ್ರಭ ವಾರ್ತೆ ಬೆಂಗಳೂರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ 9 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಗದಗ, ಯಾದಗಿರಿ, ಹಾಸನ, ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿನ 9 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ ಒಟ್ಟು 42 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 43 ಕೋಟಿ ರು. ಮೌಲ್ಯದ ಆಸ್ತಿಪತ್ತೆಯಾಗಿದ್ದು, ಇದರಲ್ಲಿ 34.46 ಕೋಟಿ ರು. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ದಾಳಿಗೊಳಗಾದ 9 ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ ಪತ್ತೆ?:

ಬೆಂಗಳೂರಿನ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ, ರೈತ ಸೇವಾ ಸಹಕಾರ ಸಂಘದ ಸಿಇಒ ಆರ್‌. ಶಶಿಧರ್: 5 ಕಡೆ ದಾಳಿ, 4 ಸೈಟ್‌, 2 ಮನೆ, 2 ಎಕರೆ ಕೃಷಿ ಜಮೀನು, 1.35 ಲಕ್ಷ ನಗದು, 29.74 ಲಕ್ಷ ರು. ಮೌಲ್ಯದ ಚಿನ್ನಾಭರಣ, 42.25 ಲಕ್ಷ ರು.ನ ವಾಹನಗಳು, 17.25 ಲಕ್ಷ ರು. ಎಫ್‌ಡಿ ಸೇರಿ ಒಟ್ಟು 3.43 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಎಚ್.ಸಿ ಇಂದ್ರೇಶ್: 6 ಕಡೆ ದಾಳಿ,10 ಸೈಟ್‌, 2 ಮನೆ, 1.25 ಲಕ್ಷ ನಗದು, 11.95 ಲಕ್ಷ ರು. ಮೌಲ್ಯದ ಚಿನ್ನಾಭರಣ, 18.90 ಲಕ್ಷ ರು.ನ ವಾಹನಗಳು ಸೇರಿ ಒಟ್ಟು 1.88 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಕೆಎಸ್‌ಎಚ್‌ಐಪಿ ವಿಭಾಗದ ಮುಖ್ಯ ಎಂಜಿನಿಯರ್‌ ವಸಂತ್ ವಲ್ಲಪ್ಪ ನಾಯ್ಕ್: 10 ಕಡೆ ದಾಳಿ, 4 ಸೈಟ್‌, 7 ಮನೆ, 22.20 ಎಕರೆ ಜಮೀನು ಸೇರಿ ಒಟ್ಟು 4.41 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.ಮಂಡ್ಯದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಎಸ್.ಸತೀಶ್: 4 ಕಡೆ ದಾಳಿ, 3 ಸೈಟ್‌, 2 ಮನೆ, 6 ಎಕರೆ ಜಮೀನು, 1.77 ಕೋಟಿ ಬೆಲೆಬಾಳುವ ಗೃಹೋಪಯೋಗಿ ವಸ್ತು ಸೇರಿ ಒಟ್ಟು 3.01 ಕೋಟಿ ರು. ಆಸ್ತಿ ಪತ್ತೆ.ಗದಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ.ಸುರಕೋಡ್‌: 6 ಕಡೆ ದಾಳಿ, 6 ಸೈಟ್‌, 1 ಮನೆ, 29 ಎಕರೆ ಜಮೀನು ಸೇರಿ ಒಟ್ಟು 1.82 ಕೋಟಿ ರು. ಆಸ್ತಿ ಪತ್ತೆ.ಮೈಸೂರಿನ ಜಲಮಂಡಳಿಯ ಎಇಇ ಮತ್ತು ಇಇ (ಇನ್‌ಚಾರ್ಜ್) ಆಸಿಫ್ ಇಕ್ಬಾಲ್: 4 ಕಡೆ ದಾಳಿ, 5 ಸೈಟ್‌, 7 ಮನೆ, 2.78 ಕೋಟಿ ರು.ನ ಚಿನ್ನಾಭರಣ ಸೇರಿ ಒಟ್ಟು 6.89 ಕೋಟಿ ರು. ಆಸ್ತಿ ಪತ್ತೆ.ವಿಜಯಪುರದ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಎಂಜಿನಿಯರ್ ಪಿ.ಜಿ ಪ್ರಕಾಶ್: 4 ಕಡೆ ದಾಳಿ, 2 ಮನೆ, 1 ಶಾಲಾ ಕಟ್ಟಡ, 2.64 ಕೋಟಿ ರು. ಮೌಲ್ಯದ ವಾಹನಗಳು ಸೇರಿ ಒಟ್ಟು 4.60 ಕೋಟಿ ರು. ಆಸ್ತಿ ಪತ್ತೆಯಾದಗಿರಿಯ ಇಂಧನ ಇಲಾಖೆಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವೀರೇಶ್ ಹಿರೇಮಠ್‌: 3 ಕಡೆ ದಾಳಿ, 5 ಸೈಟ್‌, 2 ಮನೆ, 8.34 ಎಕರೆ ಜಮೀನು ಸೇರಿ ಒಟ್ಟು 1.54 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ.ಸತ್ಯನಾರಾಯಣ: 7 ಕಡೆ ದಾಳಿ, 6 ಸೈಟ್‌, 3 ಮನೆ, 3.33 ಎಕರೆ ಕೃಷಿ ಜಮೀನು, 15.75 ಲಕ್ಷ ನಗದು, 1.89 ಕೋಟಿ ರು. ಮೌಲ್ಯದ ಚಿನ್ನಾಭರಣ, ಸೇರಿ ಒಟ್ಟು 7.45 ಕೋಟಿ ಆಸ್ತಿ ಪತ್ತೆ. ಇದರಲ್ಲಿ 6.82 ಕೋಟಿ ಅಕ್ರಮ ಆಸ್ತಿ.