ವಿದ್ಯಾರ್ಥಿಗಳು ಉತ್ತಮ ಆರೋಗ್ಯದ, ಭಾವನೆಗಳ, ಬುದ್ಧಿಯ ಬೆಸುಗೆಯಲ್ಲಿ ‘ತಾನು ಯಾರು?’ ಎಂಬುದನ್ನು ಅರಿತು ಆತ್ಮದ ಅರಿವು-ಆತ್ಮಶ್ರೀ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಮತ, ಧರ್ಮ, ಮೌಢ್ಯಗಳ ಅಂಧಶ್ರದ್ಧೆಯನ್ನು ತೊರೆದು ವಿಜ್ಞಾನ ಮತ್ತು ಅಧ್ಯಾತ್ಮದ ಮೊರೆ ಹೋದಾಗ ‘ನಮಗೂ-ಲೋಕಕ್ಕೂ ಕಲ್ಯಾಣವಾಗಲಿದೆ’ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ಕುವೆಂಪು ಅಧ್ಯಯನ ಪೀಠ ಬುಧವಾರ ಆಯೋಜಿಸಿದ್ದ ಕುವೆಂಪು: ಮಾತು ಮಂಥನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆತ್ಮಶ್ರೀಗಾಗಿ ವಿಜ್ಞಾನ ಮತಿಗಳಾಗಿ’ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಆರೋಗ್ಯದ, ಭಾವನೆಗಳ, ಬುದ್ಧಿಯ ಬೆಸುಗೆಯಲ್ಲಿ ‘ತಾನು ಯಾರು?’ ಎಂಬುದನ್ನು ಅರಿತು ಆತ್ಮದ ಅರಿವು-ಆತ್ಮಶ್ರೀ ಸಾಧಿಸಬೇಕು. ಉತ್ತಮ ಆಲೋಚನೆಗಳನ್ನು, ಭಾವನೆಗಳನ್ನು ಅನುಭವಿಸಬೇಕು. ಅಧ್ಯಯನಶೀಲತೆ, ಏಕಾಗ್ರತೆ, ಸಂಯಮದ ಆತ್ಮಾನುಸಂಧಾನದಲ್ಲಿ ತಪಸ್ವಿಗಳಾಗಬೇಕು ಎಂದು ತಿಳಿಸಿದರು.

ಆತ್ಮದ ಸಾರ್ವಭೌಮತ್ವವನ್ನು ಸಾಧಿಸಿದರೆ ಬದುಕು ಗಟ್ಟಿಗೊಳ್ಳುತ್ತದೆ. ಇದರಿಂದ ಆತ್ಮಹತ್ಯೆಗಳ, ಮನಸ್ತಾಪಗಳ ಸಂಖ್ಯೆ ಕ್ಷೀಣಿಸಲಿದೆ. ‘ನಾನು ಯಾರು?’ ಎಂಬ ಆತ್ಮಾವಲೋಕನವಾದರೆ ಪ್ರತ್ಯೇಕತೆಯ ಭಾವ ಕಳಚಿ ಏಕತೆಯ ಬೆಸುಗೆ ಚಿಗುರಿ ಸಮಾನತೆ ಸ್ಪುಟಿಸಲಿದೆ. ವೇದೋಪನಿಷತ್ತುಗಳ ಆಂತರಿಕ ಮಿತಿ ತೊರೆದು ವೈಜ್ಞಾನಿಕ ಮನೋಭಾವದಿಂದ ಎಲ್ಲವನ್ನೂ ಸ್ವೀಕರಿಸಿದರೆ ಪಕ್ಷಪಾತವಿರದ, ವಸ್ತುನಿಷ್ಠತೆಯ ಪ್ರಾಯೋಗಿಕ ಪುರಾವೆಗೆ ಸಾಕ್ಷಿಯಾಗುತ್ತೇವೆ ಎಂದರು.

ನಮ್ಮ ಶಕ್ತಿ ದೌರ್ಬಲ್ಯಗಳನ್ನು ತಿಳಿಯಲು, ತಿಳಿವಳಿಕೆಯನ್ನು ಪರಿಷ್ಕರಿಸಲು ವಿಜ್ಞಾನದ ನಿರಂತರ ಕಲಿಕೆ ಅಗತ್ಯವಾಗಿದೆ. ಇದರಿಂದ ಆತ್ಮದ ಹೊಳಪು ಇನ್ನಷ್ಟು ಪ್ರಜ್ವಲಿಸಲಿದೆ. ಹೊಸ ದೃಷ್ಟಿಗೆ ಮುಕ್ತವಾಗಿಸಲು ವಿಜ್ಞಾನ ಮತಿಗಳಾಗಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಕುವೆಂಪು ಅವರ ಪ್ರತಿ ಬರೆವಣಿಗೆಯಲ್ಲೂ ಸಮಾಜವನ್ನು ತಿದ್ದುವ ಸಂದೇಶವಿದೆ ಎಂದರು. ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಸ್ಮರಣಾರ್ಥ ಮೌನ ಪ್ರಾರ್ಥನೆ ಮಾಡಲಾಯಿತು. ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಡಾ. ಮನಮೋಹನ ಸಿಂಗ್ ಅವರ ಕುರಿತು ಮಾತನಾಡಿದರು.

ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ. ಗೀತಾ ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.