ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ರಾಮನಗರ ಜಿಲ್ಲೆ ಹಾರೋಹಳ್ಳಿ ತಹಸೀಲ್ದಾರ್ ವಿಜಯಣ್ಣಗೆ ಸೇರಿದ ನಗರದಲ್ಲಿರುವ ನಿವಾಸಗಳ ಮೇಲೆ ಕೋಲಾರ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.ಈ ಹಿಂದೆ ಕೋಲಾರದಲ್ಲಿ ತಹಸೀಲ್ದಾರ್ ಆಗಿದ್ದ ವಿಜಯಣ್ಣ ಪ್ರಸ್ತುತ ರಾಮನಗರ ಜಿಲ್ಲೆ ಹಾರೋಹಳ್ಳಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಕೋಲಾರದಿಂದ ಎರಡು ಕಾರುಗಳಲ್ಲಿ ಆಗಮಿಸಿರುವ ಲೋಕಾಯುಕ್ತ ಅಧಿಕಾರಿಗಳು ನಗರದ ಎಸ್‌ಐಟಿ ಮತ್ತು ಕ್ಯಾತ್ಸಂದ್ರ ಸಮೀಪದ ಮಂಚಕಲ್ ಕುಪ್ಪೆಯಲ್ಲಿರುವ ತಹಸೀಲ್ದಾರ್ ವಿಜಯಣ್ಣನ ಮನೆಗಳ ಮೇಲೆ ದಾಳಿ ಮಾಡಿದ್ದು, ಅಗತ್ಯ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತಹಸೀಲ್ದಾರ್ ವಿಜಯಣ್ಣಗೆ ಸೇರಿದೆ ಎನ್ನಲಾದ ವಾಲ್ಮೀಕಿ ನಗರದ 4ನೇ ಮುಖ್ಯರಸ್ತೆ 3ನೇ ಕ್ರಾಸ್‌ನಲ್ಲಿರುವ ವಾಸದ ಮನೆ, ಎರಡು ಬಾಡಿಗೆ ಮನೆ ಕಟ್ಟಡದಲ್ಲಿರುವ 8 ಮನೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದು, ವಾಸದ ಮನೆಯಲ್ಲಿ ತಹಸೀಲ್ದಾರ್ ಪುತ್ರ ಇದ್ದರು ಎನ್ನಲಾಗಿದೆ.ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ನಡೆದಿರುವ ದಾಳಿಯಲ್ಲಿ ಅಧಿಕಾರಿಗಳು ತಹಸೀಲ್ದಾರ್ ಅವರ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆ ನಡೆಸಿದ್ದು, ಸಂಪೂರ್ಣ ತನಿಖೆ ನಂತರ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
6 ಕಡೆ ದಾಳಿ:ತಹಸೀಲ್ದಾರ್ ವಿಜಯಣ್ಣಗೆ ಸಂಬಂಧಿಸಿದಂತೆ ಏಕಕಾಲಕ್ಕೆ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ ಎರಡು ಕಡೆ, ತುಮಕೂರು ಎರಡು ಕಡೆ, ರಾಮನಗರದ ಹಾರೋಹಳ್ಳಿ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರುಗಳಲ್ಲಿ ದಾಳಿ ನಡೆಸಿ, ಅಗತ್ಯ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಹಾರೋಹಳ್ಳಿ ಕಚೇರಿ, ಮನೆ ಮೇಲೆ ದಾಳಿ:
ಹಾರೋಹಳ್ಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ತಹಸೀಲ್ದಾರ್ ವಿಜಿಯಣ್ಣ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡ, ಗುರುವಾರ ಬೆಳಿಗ್ಗೆಯೇ ಪಟ್ಟಣದಲ್ಲಿರುವ ವಿಜಿಯಣ್ಣ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ತುಮಕೂರು ಜಿಲ್ಲೆಯವರಾದ ವಿಜಿಯಣ್ಣ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಹಾರೋಹಳ್ಳಿಗೆ ವರ್ಗಾವಣೆಯಾಗಿದ್ದರು.