ಲೋಕಾಯುಕ್ತರಿಂದ ಹಿರಿಯೂರು ನಗರಸಭೆ ಸದಸ್ಯ ಸಣ್ಣಪ್ಪ ಬಂಧನ

| Published : Jan 03 2024, 01:45 AM IST

ಸಾರಾಂಶ

ಇ-ಸ್ವತ್ತು ಮಾಡಿಸಿಕೊಡಲು 40 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ ಐದು ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭೆ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಇ-ಸ್ವತ್ತು ಮಾಡಿಸಿಕೊಡಲು ಹಣ ಪಡೆಯುವ ವೇಳೆ ಬಂಧನ

ಕನ್ನಡಪ್ರಭ ವಾರ್ತೆ ಹಿರಿಯೂರು ಇ-ಸ್ವತ್ತು ಮಾಡಿಸಿಕೊಡಲು 40 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ ಐದು ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭೆ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ನಗರಸಭೆ ಪಕ್ಷೇತರ ಸದಸ್ಯ ಡಿ.ಸಣ್ಣಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಟಿ .ನಟರಾಜು ಎನ್ನುವವರ ತಾಯಿ ದಾಸಮ್ಮನವರ ಹೆಸರಿನಲ್ಲಿ ಬಬ್ಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 11ನೇ ನಂಬರಿನ ಸೈಟ್ ಇದ್ದು, ಆ ಸೈಟ್ ನಲ್ಲಿ 2007ರಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದೀಗ ಸದರಿ ಮನೆ ಪ್ರಸ್ತುತ ನಗರಸಭೆ ವ್ಯಾಪ್ತಿಗೆ ಬರುತ್ತಿದ್ದು, ಮೇಲೆ ಮತ್ತೊಂದು ಹಂತದ ಮನೆ ನಿರ್ಮಿಸಲು ಬ್ಯಾಂಕ್ ಲೋನ್ ಪಡೆಯಲು ಇ-ಸ್ವತ್ತು ಅವಶ್ಯಕತೆಯಿತ್ತು. 01-08-2023ರಂದು ದಾಸಮ್ಮನವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆನಂತರ ಮನೆ ನಿರ್ಮಾಣದ ಲೇಔಟ್ ಪ್ಲಾನ್ ಸಹ ನೀಡಿದ್ದು, ಪ್ಲಾನ್ ಸರಿಯಾಗಿಲ್ಲ ಎಂದು ಕೇಸ್ ವರ್ಕರ್ ಹಿಂಬರಹ ನೀಡಿದ್ದರು.

ಬಳಿಕ ದೂರುದಾರರು ನಗರಸಭೆ ಸದಸ್ಯ ಸಣ್ಣಪ್ಪನವರನ್ನು ಭೇಟಿ ಮಾಡಿ ಇ-ಸ್ವತ್ತು ಮಾಡಿಸಿಕೊಡಲು ಮನವಿ ಮಾಡಿದಾಗ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಮಂಗಳವಾರ ಬೆಳಗ್ಗೆ ಮನೆಯ ಇ ಸ್ವತ್ತಿಗಾಗಿ 5 ಸಾವಿರ ರುಪಾಯಿ ಮುಂಗಡವಾಗಿ ಪಡೆಯುತ್ತಿದ್ದಾಗ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಅವರನ್ನು ವಶಕ್ಕೆ ಪಡೆದು ಲಂಚದ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ಎನ್ ವಾಸುದೇವರಾಮರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಮೃತ್ಯುಂಜಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಚಿತ್ರ 1 ನಗರಸಭೆ ಸದಸ್ಯ ಎಂ ಡಿ ಸಣ್ಣಪ್ಪ.