ಸಾರಾಂಶ
ರಾಣಿಬೆನ್ನೂರು: ನಗರದಲ್ಲಿರುವ ಹಾವೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ ಹಾಗೂ ಸ್ಥಳೀಯ ಶಿಶು ಅಭಿವೃದ್ಧಿ ಕಾರ್ಯಾಲಯದ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಹಣ, ಆಸ್ತಿಗೆ ಸಂಬಂಧಿಸಿದ ದಾಖಲಾತಿ ವಶಪಡಿಸಿಕೊಂಡಿದ್ದಾರೆ.ಶಿವಮೊಗ್ಗ ಹಾಗೂ ಹಾವೇರಿ ಲೋಕಾಯುಕ್ತ ಕಚೇರಿ ಅಧಿಕಾರಿಗಳು ಬೆಳಗಿನ ಜಾವ ಇಲ್ಲಿಯ ಮೃತ್ಯುಂಜಯ ನಗರದಲ್ಲಿರುವ ಶಿಶು ಅಭಿವೃದ್ಧಿ ಕಾರ್ಯಾಲಯದ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಮನೆ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಹಣ, ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೂ ದಾಖಲಾತಿ ಪರಿಶೀಲನೆ ನಡೆಸಿದರು.ಮನೆಗೆ ಬೀಗ ಹಾಕಿದ್ದ ಅಧಿಕಾರಿ: ಇಲ್ಲಿಯ ಶಿವಾಜಿ ನಗರದಲ್ಲಿರುವ ಹಾವೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ ತಮ್ಮ ಮನೆಗೆ ಬೀಗ ಹಾಕಿ ತಾಯಿಯ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರ ತಾಯಿ ನಿಧನ ಹೊಂದಿದ್ದ ಕಾರಣ ಊರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.ಮನೆಗೆ ಬೀಗ ಹಾಕಿರುವ ಕಾರಣ ಲೋಕಾಯುಕ್ತ ಅಧಿಕಾರಿಗಳು ಮನೆ ಮುಂದೆ ಕಾಯುತ್ತ ಕುಳಿತಿದ್ದಾರೆ. ಅಲ್ಲದೆ ಅವರು ಬಂದ ನಂತರ ಮನೆ ಶೋಧ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲಿಯವರೆಗೆ ಮನೆ ಹೊರಗೆ ವ್ಯಕ್ತಿಗಳು ಬಾರದಂತೆ ಪೊಲೀಸ್ ಕಾವಲು ಇರಿಸಲಾಗಿದೆ.