ಕಾರ್ಖಾನೆ ತ್ಯಾಜ್ಯದಿಂದ ಮುಕ್ತಿ ನೀಡುವಂತೆ ಲೋಕಾಯುಕ್ತ ಮೊರೆ

| Published : Apr 09 2024, 12:49 AM IST

ಕಾರ್ಖಾನೆ ತ್ಯಾಜ್ಯದಿಂದ ಮುಕ್ತಿ ನೀಡುವಂತೆ ಲೋಕಾಯುಕ್ತ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಖಾನೆ ತ್ಯಾಜ್ಯದಿಂದ ಸುಸ್ತಾಗಿರುವ ತಾಲೂಕಿನ ಹಿರೇಬಗನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

- ಹಿರೇಬಗನಾಳ ಗ್ರಾಮಸ್ಥರಿಂದ ಕಾನೂನು ಹೋರಾಟಕ್ಕೆ ಸಜ್ಜು ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾರ್ಖಾನೆ ತ್ಯಾಜ್ಯದಿಂದ ಸುಸ್ತಾಗಿರುವ ತಾಲೂಕಿನ ಹಿರೇಬಗನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ಹೋರಾಟ ಪ್ರಾರಂಭಿಸಿದ್ದಾರೆ.

ಕೊಪ್ಪಳ ಸುತ್ತಲೂ ತಲೆ ಎತ್ತಿರುವ 13 ಕಾರ್ಖಾನೆಗಳು ಹಾಗೂ ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾರೆ.

ಶಿವಪ್ಪ ದೇವರಮನಿ, ಮಹೇಶ ವದ್ನಾಳ ಹಾಗೂ ಗಣೇಶ ವಿಶ್ವಕರ್ಮ ಎನ್ನುವವರು ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕಾರ್ಖಾನೆ ತ್ಯಾಜ್ಯದ ವಿರುದ್ಧ ದೂರು ಸಲ್ಲಿಸಿ, ಪ್ರಾಣಕ್ಕೆ ಕುತ್ತು ಬರುವ ತ್ಯಾಜ್ಯವನ್ನು ಹೊರಸೂಸುವ ಕಾರ್ಖಾನೆಗಳ ಪ್ರತಿನಿಧಿಗಳು ಮತ್ತು ಇದಕ್ಕೆ ಅನುಮತಿ ನೀಡಿದ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಪರಿಸರ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

ದಾಖಲೆಯೊಂದಿಗೆ ದೂರು:

ಕಾರ್ಖಾನೆ ತ್ಯಾಜ್ಯದಿಂದ ಆಗುತ್ತಿರುವ ಹಾನಿ ಮತ್ತು ಪರಿಸರದ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಹಿರೇಬಗನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಅನುಭವಿಸುತ್ತಿರುವ ಯಾತನೆಯ ಕುರಿತು ಚಿತ್ರ ಸಮೇತ ದಾಖಲೆಯೊಂದಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹೊಲಗಳಲ್ಲಿನ ಬೆಳೆ ಹಾಳಾಗಿರುವುದು, ಜಾನುವಾರುಗಳು ಮೇಯಲು ಆಗದಂತೆ ಮೇವು ಆಗಿರುವುದು ಸೇರಿದಂತೆ ಎಲ್ಲ ವಿವರಣೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಪ್ರಯೋಜನವಾಗಿಲ್ಲ:

ಈ ಕುರಿತು ಹಿಂದೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಹಾಗೂ ಪರಿಸರ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಉಸಿರುಗಟ್ಟುವ ವಾತಾವರಣ ಇದ್ದರೂ ಸಹ ಅಧಿಕಾರಿಗಳು ಕಾರ್ಖಾನೆ ತ್ಯಾಜ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿಲ್ಲ.

ಇದರಿಂದ ನಾವು ನಿತ್ಯ ಜೀವನ ನಡೆಸುವುದು ಕಷ್ಟವಾಗಿದೆ. ಹೊಲದಲ್ಲಿ ಕೆಲಸ ಮಾಡಿದರೆ ಮೈಮೇಲಿನ ಬಟ್ಟೆಗಳು ಕಪ್ಪಾಗಿ, ಮುಖವೆಲ್ಲಾ ಬೂದಿ ಮೆತ್ತಿಕೊಂಡು ಉಸಿರಾಟಕ್ಕೂ ಸಮಸ್ಯೆಯಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಾವು ಇಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಅನೇಕ ರೋಗಗಳಿಗೆ ದಾರಿಯಾಗಿ ಆರೋಗ್ಯ ಹಾಳಾಗುತ್ತಿದೆ. ನಮ್ಮ ಏರಿಯಾದಲ್ಲಿನ ಯುವಕರನ್ನು ಮದುವೆಯಾಗುವುದಕ್ಕೆ ಯಾವ ಯುವತಿಯರು ಮುಂದೆ ಬರುತ್ತಿಲ್ಲ ಎಂದು ವಿವರಣೆ ಬರೆದಿದ್ದಾರೆ.

ಕಾನೂನು ಹೋರಾಟ:

ಈಗ ಲೋಕಾಯುಕ್ತಕ್ಕೆ 13 ಕಾರ್ಖಾನೆಗಳ ಹೆಸರು ಸಮೇತ ದೂರು ಸಲ್ಲಿಕೆ ಮಾಡಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾನೂನು ಹೋರಾಟ ಮಾಡುತ್ತೇವೆ. ಇನ್ಮುಂದೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕಾರ್ಖಾನೆ ತ್ಯಾಜ್ಯದಿಂದ ನಮ್ಮನ್ನು ಮತ್ತು ನಮ ಹೊಲಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಇಲ್ಲದಿದ್ದರೇ ನಮ್ಮ ಹೊಲದಲ್ಲಿ ಏನೂ ಬೆಳೆಯಲಾಗದು. ಜಾನುವಾರುಗಳು ಗೊಡ್ಡು ಬಿದ್ದಿವೆ. ನಮ್ಮ ಜೀವನ ಹೇಳತೀರದಂತೆ ಆಗಿದ್ದು, ನಮಗೆ ಬದುಕಲು ಅವಕಾಶ ನೀಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.