ಮತಗಟ್ಟೆ ಪರಿಚಯಿಸಲು ನಮ್ಮ ನಡೆ ಮತಗಟ್ಟೆ ಕಡೆ

| Published : Apr 09 2024, 12:49 AM IST

ಸಾರಾಂಶ

ಆಯಾ ಮತಗಟ್ಟೆ ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಮತದಾನದ ಪ್ರಚಾರ ಮಾಡಿ ಕೊನೆಗೆ ಮತಗಟ್ಟೆಯಲ್ಲಿ ಧ್ವಜಾರೋಹಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹತ್ತಾರು ಪ್ರಯತ್ನಗಳನ್ನು ನಡೆಸುತ್ತಿದೆ. ಮುಂದುವರಿದ ಭಾಗವಾಗಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಏ. 28ರಂದು ನಮ್ಮ ನಡೆ ಮತಗಟ್ಟೆ ಕಡೆ ಹಾಗೂ ಧ್ವಜಾರೋಹಣದ ವಿಶೇಷ ಅಭಿಯಾನವೊಂದನ್ನು ನಡೆಸಲು ಯೋಜಿಸಿದೆ.

ಚುನಾವಣಾ ಆಯೋಗ ಈಗಾಗಲೇ ಸ್ವೀಪ್‌ ಚಟುವಟಿಕೆ ಮೂಲಕ ಬ್ಯಾನರ್‌-ಪೋಸ್ಟರ್‌ ಹಚ್ಚಿದೆ. ಹಲವು ರೀತಿಯ ರ್‍ಯಾಲಿಗಳ ಮೂಲಕ ಮತದಾನ ಮಾಡಲು ಮನವಿ ಮಾಡುತ್ತಿದೆ. ಕ್ರಿಕೆಟ್‌, ವಾಕ್‌ಥಾನ್‌, ಕಲಾ ತಂಡಗಳ ಮೆರವಣಿಗೆ, ಪತ್ರ ಚಳುವಳಿ ಸೇರಿದಂತೆ ಸಾಧ್ಯವಿದ್ದ ಸಂದರ್ಭಗಳನ್ನು ಬಳಸಿಕೊಂಡು ಮತದಾನದ ಜಾಗೃತಿಗೆ ಮುಂದಾಗಿದೆ. ಮತದಾರರನ್ನು ಮತಗಟ್ಟೆಗೆ ಮತ್ತಷ್ಟು ಸೆಳೆಯಲು ಮತದಾನದ ಒಂದು ವಾರ ಮುಂಚೆ ನಮ್ಮ ನಡೆ ಮತಗಟ್ಟೆ ಕಡೆ ಆಯೋಜಿಸಿದೆ.ಏತಕ್ಕೆ ಈ ನಡೆ

ಸಾಮಾನ್ಯವಾಗಿ ಮತದಾರರಿಗೆ ತಾವು ಮತ ಹಾಕಲಿರುವ ಮತಗಟ್ಟೆ ಸ್ಥಳ ಗೊತ್ತಿದ್ದರೂ ಕೆಲ ಸಂದರ್ಭಗಳಲ್ಲಿ ತಮ್ಮ ಮತಗಟ್ಟೆ ಯಾವುದು, ಅದು ಎಲ್ಲಿದೆ? ಮೊದಲಿರುವುದು ಬದಲಾವಣೆ ಆಗಿದೆಯೇ? ಅಲ್ಲಿ ಯಾವ ಸೌಲಭ್ಯಗಳಿವೆಯಂತಹ ಸಾಕಷ್ಟು ಪ್ರಶ್ನೆಗಳು ಮತದಾರರ ಮನಸ್ಸಿನಲ್ಲಿ ಇರುತ್ತವೆ. ಈ ಹಿನ್ನೆಲೆಯಲ್ಲಿ ಮತದಾರರೊಂದಿಗೆ ಜಿಲ್ಲೆಯ 1893 ಮತಗಟ್ಟೆಳಿಗೆ ಹೋಗಲು ಹಾಗೂ ಅಲ್ಲಿ ಧ್ವಜವನ್ನು ಹಾರಿಸಲು ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ.

ಯಾರು ನೇತೃತ್ವ

ಮತಗಟ್ಟೆ ಹಂತದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಹಂತದಲ್ಲಿ, ಗ್ರಾಪಂ ಮಟ್ಟದಲ್ಲಿ ಪಿಡಿಒಗಳ ನೇತೃತ್ವದಲ್ಲಿ, ತಾಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಯಾ ಮತಗಟ್ಟೆ ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಮತದಾನದ ಪ್ರಚಾರ ಮಾಡಿ ಕೊನೆಗೆ ಮತಗಟ್ಟೆಯಲ್ಲಿ ಧ್ವಜಾರೋಹಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ಹೇಗಿರುತ್ತೆ?

ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಬಿಳಿ ಬಣ್ಣದ ಧ್ವಜ ಸಿದ್ಧಪಡಿಸಿ ಅದರಲ್ಲಿ ಚುನಾವಣಾ ಪರ್ವ, ದೇಶದ ಗರ್ವ ಎಂಬ ಘೋಷಣೆ, ಮತದಾನ ದಿನ ಹಾಗೂ ಸಮಯ ನಮೂದಿಸಲಾಗಿರುತ್ತದೆ. ಒಟ್ಟಾರೆ ಮತದಾನ ಮಾಡುವಂತೆ ಪ್ರೇರಿಸುವ ಕಾರ್ಯ ಇದಾಗಿದೆ. ಧ್ವಜವು ಮತದಾನ ಮಾಡುವ ದಿನದ ವರೆಗೂ ಮತಗಟ್ಟೆ ಮೇಲೆ ಹಾರಲಿದೆ ಎಂದು ಜಿಲ್ಲಾ ಸ್ವೀಪ ಮುಖ್ಯಸ್ಥರಾದ ಸ್ವರೂಪ ಟಿ.ಕೆ. ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಹಾಗೂ ಸಂಬಂಧಿತ ವ್ಯಕ್ತಿಗಳ ಭಾಗವಹಿಸುವುದಕ್ಕೆ ಅವಕಾಶ ಇರುವುದಿಲ್ಲ. ನೈತಿಕ ಚುನಾವಣೆ ಕುರಿತು ಮತದಾರರಿಗೆ ಭಿತ್ತಿ ಪತ್ರ ವಿತರಣೆ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಕುರಿತು ಖಚಿತ ಪಡಿಸಿಕೊಳ್ಳುವುದು, ಮತದಾರರ ಸಹಾಯವಾಣಿ 1950 ಬಗ್ಗೆ ಜಾಗೃತಿ, ನಿಮ್ಮ ಮತಗಟ್ಟೆ ಎಲ್ಲಿದೆ ಎಂದು ತಿಳಿದುಕೊಳ್ಳಿ ಹಾಗೂ ಮೇ 7ರಂದು ಮತದಾನ ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.