ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಕುಟುಂಬಸ್ಥರೊಂದಿಗೆ ಭಾನುವಾರ ಭೇಟಿ ಕೊಟ್ಟು ಕ್ಷೇತ್ರಾಧಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.ಕ್ಷೇತ್ರಕ್ಕೆ ಭೇಟಿ ಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಪತ್ನಿ ಶೋಭಾ ಪಾಟೀಲ್ ಹಾಗೂ ಕುಟುಂಬಸ್ಥರು ಕ್ಷೇತ್ರಪಾಲಕ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಜರುಗಿದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದುಕೊಂಡರು.
ನಂತರ ಕ್ಷೇತ್ರದ ಶ್ರೀಮಾಳಮ್ಮ ದೇವಿ, ಶ್ರೀಸ್ಥಂಬಾಂಬಿಕೆ ದೇವಿ ಮತ್ತು ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಶ್ರೀಗುರು ಭೈರವೈಕ್ಯ ಮಂದಿರಕ್ಕೆ ಕುಟುಂಬಸ್ಥರೊಂದಿಗೆ ತೆರಳಿ ಮಹಾಗದ್ದುಗೆಗೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿ ಕ್ಷೇತ್ರಾಧಿದೇವತೆಗಳ ಹಾಗೂ ಭೈರವೈಕ್ಯಶ್ರೀಗಳ ಆಶೀರ್ವಾದ ಪಡೆದುಕೊಂಡರು.ಶ್ರೀಕ್ಷೇತ್ರಕ್ಕೆ ಭೇಟಿಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ದಂಪತಿಗೆ ಶ್ರೀಮಠದ ಸಂಪ್ರದಾಯದಂತೆ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.
ಕ್ಷೇತ್ರದಲ್ಲಿ ಜರುಗಿದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ ಬಳಿಕ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳೊಂದಿಗೆ ಕೆಲಕಾಲ ಚರ್ಚಿಸಿದ ನ್ಯಾಯಮೂರ್ತಿಗಳು ಶ್ರೀಗಳ ಆಶೀರ್ವಾದ ಪಡೆದು ತೆರಳಿದರು.
ಶ್ರೀಸೌಮ್ಯಕೇಶವಸ್ವಾಮಿ ದೇಗುಲಕ್ಕೆ ಭೇಟಿ:
ಭಾನುವಾರ ಮಧ್ಯಾಹ್ನ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ದಂಪತಿಗೆ ದೇಗುಲದ ಪ್ರವೇಶದ್ವಾರದಲ್ಲಿ ಮಂಗಳವಾದ್ಯದೊಂದಿಗೆ ಪ್ರಧಾನ ಅರ್ಚಕ ತಿರುನಾರಾಯಣ ಅಯ್ಯಂಗಾರ್ ಅವರು ಹೂ ಮಾಲೆ ಹಾಕಿ ಸ್ವಾಗತ ಕೋರಿ ಬರಮಾಡಿಕೊಂಡರು.ದೇವಾಲಯ ಪ್ರವೇಶಿಸಿದ ನ್ಯಾಯಮೂರ್ತಿಗಳು ಕುಟುಂಬಸ್ಥರೊಂದಿಗೆ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಪ್ರಧಾನ ಅರ್ಚಕರು ದೇವಸ್ಥಾನದ ಇತಿಹಾಸವನ್ನು ವಿವರಿಸಿದರು. ಬಳಿಕ ದೇಗುಲಕ್ಕೆ ತೆರಳಿದ ನ್ಯಾಯಮೂರ್ತಿಗಳು ಶ್ರೀ ಸೌಮ್ಯಕೇಶವಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನಾಶೀರ್ವಾದ ಪಡೆದುಕೊಂಡರು.
ದೇಗುಲದ ಸೌಮ್ಯಕೇಶವಸ್ವಾಮಿ, ವೈಕುಂಠ ನಾರಾಯಣ, ಶ್ರೀದೇವಿ, ಭೂದೇವಿ, ನೀಲಾದೇವಿ, ಆಳ್ವರ ಮಂದಿರ, ರಾಮಾನುಜಚಾರ್ಯರ ಮಂದಿರಕ್ಕೆ ಪತ್ನಿಯೊಂದಿಗೆ ದೀಪಾರಾಧನೆ ಮಾಡಿದ ನ್ಯಾಯಮೂರ್ತಿಗಳು ತಮ್ಮ ಭಕ್ತಿಭಾವ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.ನ್ಯಾಯಮೂರ್ತಿಗಳ ಪತ್ನಿ ಶೋಭಾ ಪಾಟೀಲ್, ಕುಟುಂಬಸ್ಥರು, ಮಂಡ್ಯ ಜಿಲ್ಲಾ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು, ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್‌ಕುಮಾರ್, ಇನ್ಸ್‌ಪೆಕ್ಟರ್ ರವಿಕುಮಾರ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ರಾಜಸ್ವ ನಿರೀಕ್ಷಕ ಗೋವಿಂದರಾಜು, ಮಧುಸೂಧನ್ ಸೇರಿದಂತೆ ಹಲವರು ಇದ್ದರು.