ಸಾರಾಂಶ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾನಸಿಕ ವೇದನೆ ನೀಡಲಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮುಡಾ ವಿಚಾರದಲ್ಲಿ ಮಸಿ ಬಳಿಯಲು ಬಿಜೆಪಿ, ಜೆಡಿಎಸ್ ಷಡ್ಯಂತ್ರ ನಡೆಸಿತ್ತು. ಆದರೆ, ಮುಡಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.ನಗರದ ಲೋಕಾಯುಕ್ತ ಕಚೇರಿ ಬಳಿ ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ಸತ್ಯಮೇವ ಜಯತೇ ಎಂಬ ಪೋಸ್ಟರ್ ಹಿಡಿದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾನಸಿಕ ವೇದನೆ ನೀಡಲಾಗಿತ್ತು. ಆದರೆ, ಇದೀಗ ಸುಪ್ರೀಂಕೋರ್ಟ್ ತೀರ್ಪಿನಿಂದ ಪ್ರತಿಪಕ್ಷಗಳಿಗೆ ಸೋಲಾಗಿದೆ. ಈ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ, ನ್ಯಾಯಾಂಗದ ಮೇಲಿನ ಭರವಸೆ ಹೆಚ್ಚಿಸಿದೆ ಎಂದರು.
ಸಿಎಂ ಪತ್ನಿ ಪಾರ್ವತಿ ಅವರ ವಿಚಾರದಲ್ಲಿ ಒಬ್ಬ ಸೈಡ್ ಆ್ಯಕ್ಟರ್ ಒಬ್ಬನನ್ನು ಪ್ರತಿಪಕ್ಷಗಳು ಎತ್ತಿ ಕಟ್ಟಿ ದೂರು ಕೊಡಿಸಿದ್ದವು. ಇಡಿ ಅಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದವು. ಇದೀಗ ಕೋರ್ಟ್ ಛೀಮಾರಿ ಹಾಕಿದೆ. ಇನ್ನಾದರೂ ಬಿಜೆಪಿ ಇಡಿ, ಐಟಿ ಅಂತಹ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು. ಹಾಗೆಯೇ, ತನಿಖಾ ಸಂಸ್ಥೆಗಳು ಬಿಜೆಪಿ, ಆರ್ ಎಸ್‌ಎಸ್‌ಏಜೆಂಟರಾಗಿ ಕೆಲಸ ಮಾಡುವುದನ್ನೂ ಬಿಡಬೇಕು ಎಂದು ಅವರು ಆಗ್ರಹಿಸಿದರು.ಇಡಿ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಸಲುವಾಗಿ ಕಾಂಗ್ರೆಸ್ ಪಕ್ಷವು ಸದ್ಯದಲ್ಲೇ ರಾಜ್ಯಾದ್ಯಂತ ಆಂದೋಲನ ಹಮ್ಮಿಕೊಳ್ಳಲಿದೆ. ಆಂದೋಲನ ಯಾವ ರೀತಿ ಇರಬೇಕು ಎನ್ನುವುದನ್ನು ರಾಜ್ಯ ನಾಯಕರ ಜೊತೆಗೆ ಚರ್ಚಿಸಿ ರೂಪರೇಷೆ ಸಿದ್ಧಗೊಳಿಸಲಾಗುತ್ತದೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಕೆ. ಮಹೇಶ್, ಬಸವಣ್ಣ ಮೊದಲಾದವರು ಇದ್ದರು.