ನಗರಸಭೆಯಲ್ಲಿ ತೆರಿಗೆ ಪಾವತಿ ಮಾಡಲು ಖಾಸಗಿ ವ್ಯಕ್ತಿಗಳು ಹಣ ಪಡೆದುಕೊಳ್ಳುತ್ತಿದ್ದಾರೆ. ಇ-ಸ್ವತ್ತು ಮತ್ತಿತರ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಸಿಬ್ಬಂದಿಗೆ ಪ್ರಾಮಾಣಿಕ ಸೇವೆ ನೀಡುವಂತೆ ಸಲಹೆ ನೀಡಿದರು.

ಹಾವೇರಿ: ನಗರಸಭೆಯಲ್ಲಿ ತೆರಿಗೆ ಪಾವತಿ ಮಾಡಲು ಖಾಸಗಿ ವ್ಯಕ್ತಿಗಳು ಹಣ ಪಡೆದುಕೊಳ್ಳುತ್ತಿದ್ದಾರೆ. ಇ-ಸ್ವತ್ತು ಮತ್ತಿತರ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಸಿಬ್ಬಂದಿಗೆ ಪ್ರಾಮಾಣಿಕ ಸೇವೆ ನೀಡುವಂತೆ ಸಲಹೆ ನೀಡಿದರು.

ಏಪ್ರಿಲ್‌ ತಿಂಗಳಲ್ಲಿ ಬಹುತೇಕ ನಗರಸಭೆಯ ಆಸ್ತಿಗಳ ವಿವಿಧ ತೆರಿಗೆ ಸಂಗ್ರಹಣೆಯ ಅಭಿಯಾನ ನಡೆಯುತ್ತದೆ. ಈ ವೇಳೆ ಶೇ. 5ರಷ್ಟು ರಿಯಾಯಿತಿ ನೀಡುವ ಮೂಲಕ ಸಾರ್ವಜನಿಕ ತೆರಿಗೆ ಸಂಗ್ರಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಭಾಗವಾಗಿ ನಗರಸಭೆಯಲ್ಲಿ ತೆರಿಗೆ ಪಾವತಿ ಮಾಡಲು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಸರದಿಯಲ್ಲಿ ಕುಳಿತು ತಮ್ಮ ಆಸ್ತಿಗಳ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೆ ಈ ತೆರಿಗೆ ಪಾವತಿ ಮಾಡುವ ಅರ್ಜಿಯನ್ನು ಪರಿಣಿತ ವ್ಯಕ್ತಿಯೇ ಭರ್ತಿ ಮಾಡಬೇಕಾಗಿದೆ. ಪ್ರಸ್ತುತ ನಗರಸಭೆಗೆ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನಿಯೋಜನೆ ಅಸಾಧ್ಯವಾಗಿದೆ. ಅಲ್ಲದೇ ತೆರಿಗೆ ಪಾವತಿ ಮಾಡುವ ಅರ್ಜಿಯ ಪ್ರಕ್ರಿಯೆಯನ್ನು ಬಹು ಹಿಂದಿನಿಂದ ಖಾಸಗಿ ವ್ಯಕ್ತಿ ಅಥವಾ ಏಜೆನ್ಸಿಗೆ ವಹಿಸಿಕೊಡಲಾಗುತ್ತ ಬರಲಾಗಿದೆ. ಅರ್ಜಿ ಭರ್ತಿ ಮಾಡಿಕೊಡಲು ಖಾಸಗಿ ವ್ಯಕ್ತಿಗಳು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಲೋಕಾಯುಕ್ತ ಕಚೇರಿಗೆ ತಲುಪಿದ ಹಿನ್ನೆಲೆಯಲ್ಲಿ ಅದರ ವಿಚಾರಣೆ ನಡೆಸಿ ವಾಪಸಾದರು ಎನ್ನಲಾಗಿದೆ.

ಈಗಾಗಲೇ ಸಿಬ್ಬಂದಿ ಕೊರತೆಯಿಂದ ನಗರಸಭೆ ನಲುಗುತ್ತಿದ್ದು, ಪ್ರತಿ ಅಧಿಕಾರಿ ಎರಡು ಇಲ್ಲವೇ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವುದು ಅನಿವಾರ್ಯ ಎಂಬಂತಾಗಿದೆ. ಇದರ ಬೆನ್ನಲ್ಲೇ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಪ್ರತಿ ಕೆಲಸಕ್ಕೂ ಮಧ್ಯವರ್ತಿಗಳು ಅವಲಂಬಿಸಲೇಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಹ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನಗರಸಭೆಯ ಲೆಕ್ಕಪತ್ರ, ತಾಂತ್ರಿಕ, ಕಂಪ್ಯೂಟರ್, ಜನನ-ಮರಣ ಪ್ರಮಾಣಪತ್ರ ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿ ನೀಡಿ ಪಾರದರ್ಶಕ ಸೇವೆಗೆ ಸೂಚನೆ ನೀಡಿದ್ದಾರೆ.

ನಗರಸಭೆಯ ಆಸ್ತಿ ತೆರಿಗೆ ಪಾವತಿಗೆ ನಿಗದಿತ ಅರ್ಜಿ ಇದ್ದು, ಅದನ್ನು ನಮ್ಮ ಸಿಬ್ಬಂದಿ ಭರ್ತಿ ಮಾಡಲು ಸಮಯಾವಕಾಶ ಇರುವುದಿಲ್ಲ. ಹೀಗಾಗಿ ಇದನ್ನು ಬಹು ಹಿಂದಿನಿಂದಲೂ ಖಾಸಗಿ ಏಜೆನ್ಸಿ, ಸಂಸ್ಥೆ ಇಲ್ಲವೆ ವ್ಯಕ್ತಿಗೆ ಟೆಂಡರ್ ಮಾದರಿಯಲ್ಲಿ ನೀಡಲಾಗುತ್ತಿದೆ. ಆಸ್ತಿಯ ವಿವರ ಭರ್ತಿ ಮಾಡುವ ಪ್ರತಿ ಅರ್ಜಿಗೆ ₹30-50 ಸಾರ್ವಜನಿಕರಿಂದಲೇ ಪಡೆಯಬೇಕಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಜನರ ದೂರು ಆಧರಿಸಿ ಲೋಕಾಯುಕ್ತರ ನಗರಸಭೆಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ನಗರಸಭೆ ಸಿಬ್ಬಂದಿಯೊಬ್ಬರು ಹೇಳಿದರು.

ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ: ಸುಮಾರು 15 ಲೋಕಾಯುಕ್ತ ಅಧಿಕಾರಿಗಳ ತಂಡ ನಗರಸಭೆಗೆ ಬೆಳಗ್ಗೆ 10.40ಕ್ಕೆ ಆಗಮಿಸಿ, ಆಸ್ತಿ ತೆರಿಗೆ ಕೌಂಟರ್, ಅಲ್ಲಿ ಅರ್ಜಿ ಸಲ್ಲಿಸುವವರ ಹಾಗೂ ಫಾರ್ಮ್ ಭರ್ತಿ ಮಾಡುವವರ ವಿಚಾರಣೆ ನಡೆಸಿದರು. ಅಲ್ಲದೇ ನಗರಸಭೆ ಕಚೇರಿಯ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿ ಕಾರ್ಯಚಟುವಟಿಕೆ ಮಾಹಿತಿ ಪಡೆದುಕೊಂಡರಲ್ಲದೇ ಪೌರಾಯುಕ್ತರ ಜತೆಗೆ ಕೆಲಹೊತ್ತು ಚರ್ಚಿಸಿ ವಾಪಸಾದರು.