ಕುಂದಾಪುರ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳ ಕಾರ್ಯವೈಖರಿ ಹಾಗೂ ಬಾಕಿ ಅರ್ಜಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.

ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳ ಕಾರ್ಯವೈಖರಿ ಹಾಗೂ ಬಾಕಿ ಅರ್ಜಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಪಟ್ಟಣದ ಸರ್ವೆ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತ ತಂಡ ಬಾಕಿ ಉಳಿದಿರುವ ಅರ್ಜಿಗಳು ಹಾಗೂ ಅವುಗಳ ವಿಲೇವಾರಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು. ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಬೆಳಗ್ಗೆ ಆಗಮಿಸಿದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಶಂಕರಳ್ಳಿ ನೇತೃತ್ವದ ಅಧಿಕಾರಿಗಳ ತಂಡ, ವಿವಿಧ ಅರ್ಜಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿತು. ಬಾಕಿ ಅರ್ಜಿಗಳು ಯಾವ ಹಂತದಲ್ಲಿವೆ ಮತ್ತು ಅವುಗಳ ವಿಲೇವಾರಿಗೆ ವಿಳಂಬವಾಗಿರುವ ಕಾರಣಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರು.ಬೆಳಗ್ಗೆಯಿಂದ ಸಂಜೆಯವರೆಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ವೀಕ್ಷಿಸಿ, ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿಕೊಂಡರು.

ಲೋಕಾಯುಕ್ತ ಸಿಬ್ಬಂದಿಯಾದ ರಾಘವೇಂದ್ರ ಹೊಸ್ಕೋಟೆ, ಆದರ್ಶ, ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ರವೀಂದ್ರ ಗಾಣಿಗ ಹಾಗೂ ಅರುಣ್ ಕುಮಾರ್ ಕಾರ್ಯಾಚರಣೆಯಲ್ಲಿ ಸಹಕರಿಸಿದರು.