ಸರ್ಚ್ ವಾರಂಟ್‌ನೊಂದಿಗೆ 5 ವಾಹನಗಳಲ್ಲಿ ತಾಲೂಕು ಕಚೇರಿಗೆ ಆಗಮಿಸಿತು. ನಂತರ ತಹಸೀಲ್ದಾರ್ ಕಚೇರಿ, ಭೂಮಾಪನ ಇಲಾಖೆ, ರೇಕಾರ್ಡ್ ರೂಮ್, ಸೇರಿದಂತೆ ವಿವಿಧ ಶಾಖೆಗಳಲ್ಲಿನ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಾಲೂರು

ಬೋಗಸ್ ದಾಖಲೆ ಸೃಷ್ಠಿಯ ಮೂಲಕ ಸರ್ಕಾರಿ ಜಮೀನುಗಳನ್ನು ಖಾತೆ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡಿದ್ದ ಹಲವು ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ತಾಲೂಕು ಕಚೇರಿಯಲ್ಲಿ ದಿಢೀರ್ ಪರಿಶೀಲನೆ ನಡೆಸಿದರು.

ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಎಸ್‌ಪಿ) ವಿವೇಕಾನಂದ ತುಳಸಿಗೆರೆ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸರ್ಚ್ ವಾರಂಟ್‌ನೊಂದಿಗೆ 5 ವಾಹನಗಳಲ್ಲಿ ತಾಲೂಕು ಕಚೇರಿಗೆ ಆಗಮಿಸಿತು. ನಂತರ ತಹಸೀಲ್ದಾರ್ ಕಚೇರಿ, ಭೂಮಾಪನ ಇಲಾಖೆ, ರೇಕಾರ್ಡ್ ರೂಮ್, ಸೇರಿದಂತೆ ವಿವಿಧ ಶಾಖೆಗಳಲ್ಲಿನ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು.

ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಮಾಲೂರಿನಲ್ಲಿ ಭೂಮಿಯ ಮೌಲ್ಯ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಕೆಲ ಅಧಿಕಾರಿಗಳು ಮತ್ತು ಭೂಮಾಪಕರ ಸಹಭಾಗಿತ್ವದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪಗಳು ಕೇಳಿಬಂದಿದ್ದವು. ಈ ಕುರಿತು ಸಾರ್ವಜನಿಕರು ಲೋಕಾಯುಕ್ತ ಪೊಲೀಸರಿಗೆ ಹಲವು ದೂರುಗಳನ್ನು ಸಲ್ಲಿಸಿದ್ದರು. ದೂರಿನ ಮೇರೆಗೆ ಸರ್ಚ್ ವಾರಂಟ್ ಪಡೆದ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ದೂರುದಾರರಿಂದಲೂ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಕಂದಾಯ ಇಲಾಖೆಗೆ ಸೇರಿದ ಸಾರ್ವಜನಿಕರಿಂದ ೧೫ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದರು. ಅಧಿಕಾರಿಗಳು ಹಾಗೂ ನೌಕರರ ಬಳಿ ಇರುವ ನಗದು ಹಣ, ಮೊಬೈಲ್ ಪೋನ್, ಮುಮೆಂಟ್ ರೀಜಿಸ್ಟರ್‌ಗಳನ್ನು ಪರಿಶೀಲಿಸಿದರು.

ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇಲಾಖೆಯ ಡಿವೈಎಸ್ಪಿ ಪಿ.ಸಿ. ವೆಂಕಟೇಶ್, ಇನ್ಸ್ಪೆಕ್ಟರ್ ರೇಣುಕಾ ಸೇರಿದಂತೆ ಸುಮಾರು ೨೦ ಮಂದಿ ಸಿಬ್ಬಂದಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಈ ದಿಢೀರ್ ಪರಿಶೀಲನೆ ತಾಲೂಕು ಕಚೇರಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕಂದಾಯ ಇಲಾಖೆಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುವ ಸಾಧ್ಯತೆ ಇದೆ.