ಸಾರಾಂಶ
ಬಳ್ಳಾರಿ: ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಹೊಂದಿರುವ ಗುಮಾನಿ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಚ್.ಲೋಕೇಶ್ ಅವರ ಮನೆ, ಕಚೇರಿ ಹಾಗೂ ಮೂವರು ಸ್ನೇಹಿತರ ಮನೆಗಳ ಮೇಲೆ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ, ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿತು.
ಇಲ್ಲಿನ ರಾಮಾಂಜನೇಯ ನಗರದಲ್ಲಿರುವ ಲೋಕೇಶ್ ಮನೆಯ ಮೇಲೆ ಬೆಳಿಗ್ಗೆ 6 ಗಂಟೆಗೆ ಲೋಕಾಯುಕ್ತರು ದಾಳಿ ನಡೆಸಿ, ಆಸ್ತಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಆರಂಭಿಸಿದರು. ಮತ್ತೊಂದು ತಂಡ ಬಿಸಿಎಂ ತಾಲೂಕು ಕಚೇರಿ, ಇಲಾಖಾ ಸ್ನೇಹಿತರಾದ ಕೌಲ್ ಬಜಾರ್ ನಿವಾಸಿಗಳಾದ ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ವೀರಭದ್ರಯ್ಯ, ಚೇಳ್ಳಗುರ್ಕಿ ಮೊರಾರ್ಜಿ ದೇಸಾಯಿ ಶಾಲೆಯ ಮುಖ್ಯಗುರು ಬಸವರಾಜ್ ಮತ್ತೂರು ಹಾಗೂ ಹಾಸ್ಟೆಲ್ ವಾರ್ಡನ್ ಅಶೋಕ್ ಕುಮಾರ್ ನಿವಾಸಗಳ ಮೇಲೂ ದಾಳಿಗೈದು ಲೋಕಾಯುಕ್ತರು ಮಾಹಿತಿ ಸಂಗ್ರಹಿಸಿದರು.ದಾಳಿ ವೇಳೆ ₹15.20 ಲಕ್ಷ ಮೌಲ್ಯದ ಎರಡು ನಿವೇಶನಗಳು, ₹1.25 ಕೋಟಿ ಮೌಲ್ಯದ ಒಂದು ಮನೆ, ₹6.06 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಸೇರಿ ₹1.46 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹9100 ನಗದು, ₹7.44 ಲಕ್ಷ ಮೌಲ್ಯದ 120.51 ಗ್ರಾಂ ಚಿನ್ನಾಭರಣ, 35 ಸಾವಿರ ಮೌಲ್ಯದ 239 ಗ್ರಾಂ ಬೆಳ್ಳಿ, ₹15 ಲಕ್ಷ ಮೌಲ್ಯದ ಕಾರು, ₹1.50 ಲಕ್ಷ ಮೌಲ್ಯದ ಬೈಕ್ ಸೇರಿದಂತೆ ಒಟ್ಟು ₹57.60 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಎಚ್.ಲೋಕೇಶ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದ ವೇಳೆ ಆದಾಯ ಮೀರಿದ ಆಸ್ತಿ ಕಂಡು ಬಂದಿದೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಜೆ 6 ಗಂಟೆವರೆಗೂ ಮನೆ, ಕಚೇರಿಯಲ್ಲಿ ಆಸ್ತಿಗಳ ದಾಖಲಾತಿಗಳ ಸಂಗ್ರಹ ಹಾಗೂ ಪರಿಶೀಲನೆ ಕಾರ್ಯ ಮುಂದುವರಿದಿತ್ತು.ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಎಚ್.ಲೋಕೇಶ್ ವಾರ್ಡನ್‌ನಿಂದ ತಾಲೂಕು ಅಧಿಕಾರಿಯಾಗಿ ಬಡ್ತಿ ಪಡೆದಿದ್ದು, ಆದಾಯ ಮೀರಿ ಆಸ್ತಿ ಹೊಂದಿದ್ದಾರೆ. ಇನ್ನು ಸಾಕಷ್ಟು ದಾಖಲೆಗಳ ಪರಿಶೀಲನೆ ಕಾರ್ಯ ಬಾಕಿಯಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ನೇತೃತ್ವದಲ್ಲಿ ಡಿವೈಎಸ್ಪಿ ವಸಂತಕುಮಾರ್, ಸಿಪಿಐಗಳಾದ ಸಂಗಮೇಶ್, ನಾಗರತ್ನ, ರಾಜೇಶ್ ಲಮಾಣಿ, ಅಂಬರೇಷ್ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ 25ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಳಿಯಲ್ಲಿದ್ದರು.ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ವೇಳೆ ಬಿಸಿಎಂ ಅಧಿಕಾರಿ ಲೋಕೇಶ್ ಮನೆಯಲ್ಲಿ ಇರಲಿಲ್ಲ. ಲೋಕಾಯುಕ್ತ ದಾಳಿ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಬೇರೆಡೆ ತೆರಳಿದ್ದಾರೆ ಎಂದು ಹೇಳಲಾಗಿದೆ.