ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ವಸಂತ ನಾಯಕ್ ಅವರ ಸಹೋದರ ಮತ್ತು ಅವರ ಮೂಲ ಗ್ರಾಮ ಬಿಲ್ ಕೆರೂರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.ವಸಂತ ನಾಯಕ್ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ, ಬಾಗಲಕೋಟೆಯಲ್ಲಿರುವ ಅವರ ಸಹೋದರ, ಡಿಎಆರ್‌ನಲ್ಲಿ ಎಎಸ್ಐ ಆಗಿರುವ ಭೀಮಸಿಂಗ್ ನಾಯಕ್ ಅವರು ವಾಸವಾಗಿರುವ ಪೋಸ್ಟಲ್ ಕಾಲೋನಿಯ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.

ವಸಂತ ನಾಯಕ್ ಅವರ ಮೂಲ ಗ್ರಾಮವಾಗಿರುವ ಬಿಲ್ ಕೆರೂರ ಗ್ರಾಮದಲ್ಲಿ ಅವರ ತಾಯಿ ವಾಸವಿಸುವ ನಿವಾಸದ ಮೇಲೂ ದಾಳಿ ನಡೆಸಿರುವ ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳ ತಂಡ, ಬೆಳಗ್ಗೆಯಿಂದಲೇ ಮನೆಗಳಲ್ಲಿ ದಾಖಲೆಗಳನ್ನು ಜಾಲಾಡಿವೆ. ಬಿಲ್ ಕೆರೂರ ಗ್ರಾಮದಲ್ಲಿ ಕೆಲ ದಾಖಲೆಗಳನ್ನು ಪತ್ತೆ ಮಾಡಿರುವ ಲೋಕಾ ತಂಡ ಬಾಗಲಕೋಟೆಯಲ್ಲಿ ಭೀಮಸಿಂಗ್ ನಾಯಕ್ ಅವರ ಮನೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಪರಿಶೀಲನೆ ಮುಂದುವರಿಸಿದೆ.

ಬೆಂಗಳೂರಲ್ಲಿ ವಸಂತ ನಾಯಕ್ ಅವರ ಮನೆ ಮೇಲೆ ದಾಳಿ ಮಾಡಿರುವ ಬೆಂಗಳೂರು ಲೋಕಾಯಕ್ತರು, ಬಾಗಲಕೋಟೆ ಮತ್ತು ಬಿಲ್ ಕೆರೂರ ಗ್ರಾಮದಲ್ಲಿ ಬಾಗಲಕೋಟೆ ಲೋಕಾ ಎಸ್ಪಿ ಮಾನಿಂಗ್ ನಂದಗಾವಿ ಮಾರ್ಗದರ್ಶನದಲ್ಲಿ ಲೋಕಾ ಡಿಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ತಪಾಸಣಾ ಕಾರ್ಯ ಮುಂದುವರೆಸಿದೆ.