ಗೌರವಯುತ ಜೀವನ ಖಾತರಿಪಡಿಸುವುದೇ ಲೋಕಾಯುಕ್ತದ ಕೆಲಸ: ನ್ಯಾ.ಕೆ.ಎನ್.ಫಣೀಂದ್ರ

| Published : Feb 04 2024, 01:32 AM IST

ಗೌರವಯುತ ಜೀವನ ಖಾತರಿಪಡಿಸುವುದೇ ಲೋಕಾಯುಕ್ತದ ಕೆಲಸ: ನ್ಯಾ.ಕೆ.ಎನ್.ಫಣೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ಜನಿಕರಿಂದ ಅಹವಾಲು ಸ್ವೀಕಾರ ಮತ್ತು ವಿಚಾರಣೆಯ 3 ದಿನಗಳ ಕಾರ್ಯಕ್ರಮ ಉದ್ಘಾಟನೆಗೊಂಡಿತು. ರಾಜ್ಯದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಗಳ ಮೇಲೆ ನಿಗಾ ಇಡುವುದಕ್ಕಾಗಿಯೇ ಲೋಕಾಯುಕ್ತವನ್ನು ಆರಂಭಿಸಲಾಗಿದೆ. ಲೋಕಾಯುಕ್ತಕ್ಕೆ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಇಲ್ಲ, ಕೇವಲ ಸಾಮಾಜಿಕ ಸಮಸ್ಯೆಗಳ ವಿಚಾರಣೆಗೆ ಮಾತ್ರ ಲೋಕಾಯುಕ್ತಕ್ಕೆ ಅಧಿಕಾರ ಇದೆ ಎಂದು ರಾಜ್ಯದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದ್ದಾರೆ.

ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ಜನಿಕರಿಂದ ಅಹವಾಲು ಸ್ವೀಕಾರ ಮತ್ತು ವಿಚಾರಣೆಯ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕಾಂಗ ಮತ್ತು ಕಾರ್ಯಾಂಗಗಳು ಮಾಡಬಾರದನ್ನು ಮಾಡಿದಾಗ, ಮಾಡಲೇಬೇಕಾದ್ದನ್ನು ಮಾಡದಿದ್ದಾಗ, ಮಾಡಿದ್ದನ್ನೂ ಸರಿಯಾಗಿ ಮಾಡದಿದ್ದಾಗ ಲೋಕಾಯುಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ಪ್ರತಿಯಬ್ಬರೂ ಗೌರವಯುತ ಜೀವನ ನಡೆಸುವುದಕ್ಕೆ ಅಗತ್ಯ ಸೌಲಭ್ಯ, ಹಕ್ಕು ಮತ್ತು ಭಾದ್ಯತೆಗಳನ್ನು ಖಾತರಿ ಪಡೆಸುವುದು ಲೋಕಾಯುಕ್ತದ ಕೆಲಸವಾಗಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಲೋಕಾಯುಕ್ತದ ಉದ್ದೇಶವಾಗಿದೆ ಎಂದು ಹೇಳಿದರು.

ಬಡತನ ರೇಖೆಗಿಂದ ಕೆಳಗಿದ್ದು ನ್ಯಾಯಾಂಗದ ವರೆಗೆ ಹೋಗಲಿಕ್ಕೆ, ಯಾವುದೇ ಪ್ರಭಾವ ಬೀರುವುದಕ್ಕೆ ಸಾಧ್ಯವಾಗದವರು, ಸೈದ್ಧಾಂತಿಕ ಜೀವನ ನಡೆಸುವವರು ಮತ್ತು ಪ್ರಾಮಾಣಿಕ ಅಧಿಕಾರಿ - ಜನಪ್ರತಿನಿಧಿಗಳ ವಿರುದ್ಧ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸುವವರು ಮಾತ್ರ ಲೋಕಾಯುಕ್ತಕ್ಕೆ ಬರುತ್ತಾರೆ ಎಂದವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ವಹಿಸಿದ್ದು, ಅಧಿಕಾರಿಗಳು ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ದೂರುಗಳನ್ನು ಸಕರಾತ್ಮಕವಾಗಿ ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಪಾರದರ್ಶಕವಾಗಿ ವ್ಯವಹರಿಸುವ ನೈತಿಕತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಲೋಕಾಯುಕ್ತ ಉಪನಿಬಂಧಕ ಎಂ.ಎ.ಚೆನ್ನಕೇಶವ ರೆಡ್ಡಿ ಮತ್ತು ರಂಗೇಗೌಡ, ಮಂಗಳೂರು ವಿಭಾಗ ಅಧೀಕ್ಷಕ ಸಿ.ಎ.ಸೈಮನ್, ಜಿಲ್ಲೆ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್. ಶರ್ಮಿಳಾ, ಜಿ.ಪಂ. ಸಿಇಒ ಪ್ರತೀಕ್ ಬಯಾಲ್, ಅರಣ್ಯ ಇಲಾಖೆಯ ಕುಂದಾಪುರ ಡಿಎಫ್‌ಒ ಗಣಪತ್, ಕಾರ್ಕಳ ವನ್ಯಜೀವಿ ಡಿಎಫ್‌ಒ ಶಿವರಾಮ್ ಬಾಬು, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಎಸ್ಪಿ ಅರುಣ್ ಕೆ. ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಸ್ವಾಗತಿಸಿದರು. ಜಿಲ್ಲಾ ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.