ಗುಲ್ಬರ್ಗ ವಿವಿ ಪರೀಕ್ಷಾಂಗದ ಅವ್ಯವಸ್ಥೆಗೆ ಲೋಕಾ ಎಸ್ಪಿ ದಂಗು!

| Published : Jul 25 2024, 01:17 AM IST

ಗುಲ್ಬರ್ಗ ವಿವಿ ಪರೀಕ್ಷಾಂಗದ ಅವ್ಯವಸ್ಥೆಗೆ ಲೋಕಾ ಎಸ್ಪಿ ದಂಗು!
Share this Article
  • FB
  • TW
  • Linkdin
  • Email

ಸಾರಾಂಶ

Lokayukta SP strikes over Gulbarga University examination hall chaos

ಕನ್ನಡಪ್ರಭ ವಾರ್ತೆ ಕಲಬುರಗಿ

ವರ್ಷಗಳಿಂದ ವಿಲೇವಾರಿ ಆಗದೆ ಬಿದ್ದಿರುವ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣ ಪತ್ರ ಕೋರಿ ಬಂದ ಅರ್ಜಿಗಳ ರಾಶಿ ಒಂದೆಡೆಯಾದರೆ, ಶುಲ್ಕ ಕಟ್ಟಿ ಅಂಕಪಟ್ಟಿಗಾಗಿ ಅಲೆದಾಡಿದರೂ ಪದವೀಧರರ ಕೈ ಸೇರದೆ ಅಲ್ಲೇ ಬಿದ್ದುಕೊಂಡ ಅಂಕಪಟ್ಟಿಗಳ ರಾಶಿ ಇನ್ನೊಂದೆಡೆ, ಇನ್ನು ಎರಡೆರಡು ಬಾರಿ ಅರ್ಜಿ ಹಾಕಿದರೂ ದೊಕದ ಕಾನ್ವೋಕೇಷನ್‌ ಸರ್ಟಿಫಿಕೇಟ್‌ಗಳ ರಾಶಿ...

ಗುಲ್ಬರ್ಗ ವಿವಿ ಪರೀಕ್ಷಾ ವಿಭಾಗದಲ್ಲಿನ ಇವೆಲ್ಲ ಹುಳುಕು- ಕೊಳಕಿನ ನೋಟಗಳು ಬುಧವಾರ ಅಲ್ಲಿಗೆ ಲೋಕಾಯುಕ್ತ ಎಸ್ಪಿ ಜಾನ್‌ ಅಂಟೋನಿ ಭೇಟಿ ಕಾಲದಲ್ಲಿ ಕಂಡು ಬಂದವು.

ಪರೀಕ್ಷಾಂಗ ಅಂದರೆ ವಿವಿ ಮೂಗು ಇದ್ದಂತಿರಬೇಕಿತ್ತು. ಮಾನವನ ದೇಹದಲ್ಲಿ ಮೂಗು ಹೇಗೆ ಮುಖ್ಯವೋ ಹಾಗೆಯೇ ಪರೀಕ್ಷಾಂಗ ವಿವಿಗೆ ಬಲು ಮುಖ್ಯವಾದರೂ ಇಲ್ಲಿ ಇದೇ ಅಂಗದಲ್ಲಿ ಅಂದೇರಿ ದರ್ಬಾರ್‌ ಕಂಡು ಖುದ್ದು ಎಸ್ಪಿ ಲೋಕಾಯುಕ್ತರೇ ದಂಗಾದರು.

ಹೀಗಾದ್ರೆ ಪದವೀಧರರ ಗತಿ ಏನ್ರಿ? ಅವರು ಅಂಕಪಟ್ಟಿ ಪಡೆಯೋದು ಯಾವಾಗ? ನೌಕರಿ ಹೋಗೋದು ಯಾವಾಗ? ಉನ್ನತ ಶಿಕ್ಷಣ ಹೊಂದೋದು ಯಾವಾಗ? ಎಂದು ಅಲ್ಲಿನ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ ಹಾಗೂ ಸಿಬ್ಬಂದಿಗಳ ಮುಂದೆ ಪ್ರಶ್ನೆಗಳ ಸುರಿಮಳೆಗರೆದು ಗರಮ್‌ ಆದರು.

ಪರೀಕ್ಷಾ ವಿಭಾಗದಲ್ಲಿನ ಕಡತಗಳನ್ನು ಖುದ್ದು ಎಸ್ಪಿಯವರು ಜಾಲಾಡಿದಾಗ ಅಲ್ಲಿ ಮೂರ್ನಾಲ್ಕು ವರ್ಷದಿಂದ ಅಂಕಪಟ್ಟಿ, ಕಾನ್ವಕೇಷನ್‌ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟಂತಹವರಿಗೆ ವಿಲೇವಾರಿ ಮಾಡದೆ ಹಾಗೇ ಇರಿಸಿಕೊಂಡಿರೋದನ್ನ ಗಮನಿಸಿ ರೇಗಾಡಿದರು. ಅಲ್ಲಿನ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದ ಎಸ್ಪಿ ಜಾನ್‌ ಆಂಟೋನಿ, ನೀವು ಹೀಗೆ ಅಲಕ್ಷತನ ತೋರಿದರೆ ಪದವಿ ಪಡೆದವರ ಗತಿ ಏನೆಂದು ಕೆಂಡ ಕಾರಿದರು.

ನಾಚಿಕೆ ಆಗಬೇಕು ನಿಮಗೆಲ್ಲರಿಗೂ:

ನಾಲ್ಕಾರು ವರ್ಷದಿಂದ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಕಾನ್ವಕೇಷನ್‌ ಪತ್ರಗಳನ್ನು ಪಾಸಾದವರಿಗೆ ನೀಡದೆ ಹಾಗೇ ಇದ್ದೀರಲ್ಲ, ನಿಮೆಗಲ್ಲರಿಗೂ ನಾಚಿಕೆ ಆಗಬೇಕು ಎಂದು ಅಲ್ಲಿದದ್ದವರಿಗೆ ಎಸ್ಪಿ ತಿವಿದರು. ಇದೆಂತಹ ಪರೀಕ್ಷಾಂಗ? ಇಲ್ಲಿ ಎಲ್ಲವೂ ಅವ್ಯವಸ್ಥೆಯೇ ಕಾಣುತ್ತಿದೆ. ಇಲ್ಲಿ ಯಾಕೆ ಹೀಗೆಲ್ಲಾ ಅಲಕ್ಷತನ? ವಿದ್ಯಾರ್ಥಿಗಳ ಜೊತೆ ಹೀಗೆ ಚೆಲ್ಲಾಟ ಆಡಿದರ ಅವರ ಭವಿಷ್ಯದ ಗತಿ ಏನೆಂದು ಅಲ್ಲಿದ್ದವರನ್ನೆಲ್ಲ ತರಾಟೆಗೆ ತೆಗೆದುಕೊಂಡರು.

ಅಂಕಪಟ್ಟಿ ನೀಡಿದ್ದು ಯಾವ ಲೆಕ್ಕ?:

2021ರಿಂದ ಅಂಕಪಟ್ಟಿ ವಿಲೇವಾರಿಯಾಗದೆ ಬಾಕಿ ಇವೆ. ಇದ್ಯಾವ ಲೆಕ್ಕ? ಹೀಗಾದರೆ ಪದವೀಧರರ ಗತಿ? ಇವರಿಗೆಲ್ಲರಿಗೂ ಅಂಕಪಟ್ಟಿ, ಕಾನ್ವಕೇಷನ್‌ ನೀಡಲು ಏನು ತೊಂದರೆ? ಎಂದು ಕುಲಸಚಿವೆ ಮೇಧಾವಿನಿ ಕಟ್ಟಿಯವರಿಗೆ ಪ್ರಶ್ನಿಸಿದರು.

ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಎರಡೆರಡು ಬಾರಿ ಎಲ್ಲಾನು ಬಿಟ್ಟು ಬಂದೀವಿ, ಎರಡೆರಡು ಬಾರಿ ಶುಲ್ಕ ಕಟ್ಟೋ ಫಜೀತಿ ಬಂದಿದೆ ಎಂದು ಅಲ್ಲಿದ್ದ ಪದವೀಧರರು ಎಸ್ಪಿ ಗಮನಕ್ಕೆ ತಂದಾಗ ಕೆಂಡಾಮಂಡಲರಾದ ಎಸ್ಪಿ ಜಾನ್‌ ಮೊದಲೇ ಬಾರಿ ಬಂದಾಗಲೇ ಕಾನ್ವಕೇಷನ್‌ ಪತ್ರ ನೀಡಬೇಕು, 2 ನೇ ಬಾರಿ ಬಂದಾಗಲೂ ಕೊಡಲಾಗದು ಎಂದರೆ ನಿಮಗೆ ನಾಚಿಕೆ ಆಗಬೇಕು ಎಂದು ಮಾತಲ್ಲಿ ತಿವಿದರು.

ಎಸ್ಪಿ ಮುಂದೆ ಪದವೀಧರರ ಕಣ್ಣೀರು

ಬೀದರ್‌ನಿಂದ ಅಂಕ ಪ್ರಮಾಣ ಪತ್ರಕ್ಕಾಗಿ ಬಂದಿದ್ದ ಪದವೀಧರೆ ಕಣ್ಣೀರು ಹಾಕುತ್ತಲೇ ಲೋಕಾಯುಕ್ತ ಎಸ್ಪಿ ಜಾನ್‌ ಆಂಟೋನಿಯವರಿಗೆ ಕಂಡು ಸಾವಿರಾರು ರುಪಾಯಿ ಶುಲ್ಕ ಕಟ್ಟಿರುವೆ. ಇಂದಿಗೂ ಅಂಕಪಟ್ಟಿ ನೀಡುತ್ತಿಲ್ಲ. ಪರೀಕ್ಷಾಂಗದಲ್ಲಿ ಬಂದು ಟೇಬಲ್‌ನಿಂದ ಟೇಬಲ್‌ಗೆ ಅಲೆಸುತ್ತಿದ್ದಾರೆ. ಬೀದರ್‌ನಿಂದ ಕಲಬುರಗಿಗೆ ಬರೋದು 3 ಗಂಟೆ ಪ್ರಯಾಣ ಮಾಡಬೇಕು. ಮಕ್ಕಳು, ಮರಿ ಕಟ್ಟಿಕೊಂಡು ಬಂದರೂ ಊಟದ ಟೈಮಾಯ್ತು ಎಂದ ಎದ್ದು ಹೋಗುತ್ತಾರೆ. ಅದ್ಯಾವಾಗ ಅಂಕಪಟ್ಟಿ ಸಿಗುತ್ತದೋ? ಇವರು ಯಾವಾಗ ಕೊಡುತ್ತಾರೋ? ಎಂದು ಗೋಳಾಡಿ ಕಣ್ಣೀರಿಟ್ಟರು. ಅಂಕಪಟ್ಟಿಗಾಗಿ ಹತ್ತಾರು ಬಾರಿ ಮಕ್ಕಳನ್ನು ಕಟ್ಟಿಕೊಂಡು ಬಂದು ಹೋಗುತ್ತದ್ದರೂ ನಮ್ಮ ಗೋಳನ್ನು ಯಾರೊಬ್ಬರೂ ಇಲ್ಲಿದ್ದವರು ಕಕೇಳುತ್ತಿಲ್ಲ. ನಮಗೆ ಓದಿದ್ದಕ್ಕೆ ಅಂಕಪಟ್ಟಿ ಅವರು ಯಾವಾಗ ಕೊಡುವರೋ ಎಂಬಂತಾಗಿದೆ ಎಂದು ಕಣ್ಣೀರಿಟ್ಟರು. ಪರೀಕ್ಷೆ ವಿಭಾಗಕ್ಕೆ ಭೇಟಿ ನೀಡಿದ್ದ ಜಾನ್ ಆಂಟೋನಿ ಅವರು, ಕಣ್ಣೀರಿಟ್ಟ ವಿದ್ಯಾರ್ಥಿನಿಗೆ ವಿಶ್ವವಿದ್ಯಾಲಯ ಸ್ಥಳದಲ್ಲಿ ಸಮಸ್ಯೆಯನ್ನು ಬಗೆಹರಿಸಿದರು. ವಿದ್ಯಾರ್ಥಿ ಪವಿತ್ರಾ ಅವರ ಅಂಕಪಟ್ಟಿಯನ್ನು ಕೊಡಿಸಿದರು. ಬೀದರ್‌ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ನಳ್ಳಿಯ ಪವಿತ್ರಾ ತಂದೆ ರಾಜಕುಮಾರ್ ಎರಡನೇ ಸೆಮಿಸ್ಟರ್. ಬಿ.ಎಸ್.ಸಿ. 2021ರಲ್ಲಿ ಆನ್ಲೈನಲ್ಲಿ ಶುಲ್ಕ ಕೂಡ ಭರಿಸಿದ್ದರೂ ಈಕೆಗೆ ಗುಲ್ಬರ್ಗ ವಿಶ್ವವಿದ್ಯಾಲಯದವರು ಅಂಕಪಟ್ಟಿ ಕೊಡಲು 4 ವರ್ಷ ವಿಳಂಬ ಮಾಡಿರೋದು ಭೇಟಿ ಕಾಲಕ್ಕೆ ಗೊತ್ತಾಗಿ ಎಸ್ಪಿಯವರು ಪರೀಕ್ಷಾಂಗದ ವಿರುದ್ಧ ಕೆಂಡ ಕಾರಿದ್ದಾರೆ.

ಪರೀಕ್ಷಾಂಗದಲ್ಲಿ ಭ್ರಷ್ಟಾಚಾರದ ಕಮಟು!

ಪರೀಕ್ಷಾಂಗ ಸುತ್ತಾಡಿದ ಎಸ್ಪಿ ಲೋಕಾಯುಕ್ತ ಜಾನ್‌ ಆಂಟೋನಿ, ಇಲ್ಲಿನ ಅವ್ಯವಸ್ಥೆ, ಪದವೀಧರರ ಗೋಳಾಟ ನೋಡಿದರೆ ಅಂಕಪಟ್ಟಿ, ಕಾನ್ವಕೇಷನ್‌ ಪತ್ರಕ್ಕಾಗಿ ಭಾರಿ ಭ್ರಷ್ಟಾಚಾರವೇ ನಡೆಯುತ್ತಿದೆ ಅನ್ನೋ ಗುಮಾನಿ ಬರುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ತಾವು ಓದಿದ್ದಕ್ಕೆ ಪ್ರತಿಯಾಗಿ ಅಂಕಪಟ್ಟಿ ಪಡೆಯಲು ಅದಕ್ಕಾಗಿ ಪದವೀಧರರು ಅದೆಷ್ಟು ಬಾರಿ ಶುಲ್ಕ ಕಟ್ಟಿ ಮನವಿ ಮಾಡಬೇಕು? ಅಂಕಪಟ್ಟಿ ಇಲ್ಲದೆ ಅವರು ಮುಂದೆ ಹೋಗೋದು ಹೇಗೆ? ಉದ್ಯೋಗ, ಉನ್ನತ ಅಧ್ಯಯನ ಮಾಡೋದಾದರೂ ಹೇಗೆ? ಉನ್ತ ವ್ಯಾಸಂಗಕ್ಕಾಗಿ ಯಾರು ಇವರಿಗೆ ಪ್ರವೇಶ ಕೊಡುತ್ತಾರೆ? ಈ ಸಮಸ್ಯೆ ಪರಿಹಾರ ಯಾವಾಗ? ಎಂದು ಎಸ್ಪಿ ಜಾನ್‌ ಖಡಕ್ಕಗಿ ಪ್ರಶ್ನಿಸಿದಾಗ ಅಲ್ಲದ್ದ ಸಿಬ್ಬಂದಿ ಇಲ್ಲಿ ಸಿಬ್ಬಂದಿಯೇ ಇಲ್ಲ, ಹೀಗಾಗಿ ಎಲ್ಲವೂ ಆಯೋಮಯವಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದರು.

ಹೊರಗುತ್ತಿಗೆ ನೌಕರರ ಗುಮ್ಮ!

ಅಷ್ಟೊತ್ತಿಗಾಗಲೇ ಅಲ್ಲಿರುವ ಹೊರಗುತ್ತಿಗೆ ನೌಕರರು ಅಂಕಪಟ್ಟಿ ಕೇಳಲು ಬಂದ ಪದವೀಧರರ ಮೇಲೆಯೇ ಆರೋಪ ಮಾಡಲು ಮುಂದಾದಾಗ ಸಿಡಿಮಿಡಿಗೊಂಡ ಎಸ್ಪಿಯವರು ಇದನ್ನೆಲ್ಲ ಸಿಬ್ಬಂದಿಯಾಗದ ನಿಮ್ಮಿಂದ ಕೇಳಲಾಗದು. ಹೊರಗುತ್ತಿಗೆಯಾಗಿ ಈ ನೌಕರರನ್ನು 6 ತಿಂಗಳ ಮೇಲೆ ಇಟ್ಟುಕೊಳ್ಳುವಂತಿಲ್ಲ. ಇಂತಹವರನ್ನು ಯಾಕೆ ಇಲ್ಲಿ ಇನ್ನೂ ಉಳಿಸಿಕೊಂಡಿದ್ದೀರಿ? ಎಂದು ಪರೀಕ್ಷಾಂಗದ ಕುಲಸಚಿವರನ್ನೇ ಎಸ್ಪಿಯವರು ತರಾಟೆಗೆ ತೆಗದುಕೊಂಡರು.