ಬೀಳಗಿ ಪಪಂಗೆ ಲೋಕಾಯುಕ್ತ ಭೇಟಿ, ಕಡತ ಪರಿಶೀಲನೆ

| Published : Aug 09 2025, 12:09 AM IST

ಸಾರಾಂಶ

ಬೀಳಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಲೋಕಾಯುಕ್ತ ಪೊಲೀಸ್‌ ಇನಸ್ಪೆಕ್ಟರ್‌ ಪ್ರಭು ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಕಚೇರಿಯ ಎಲ್ಲಾ ವಿಭಾಗಗಳಲ್ಲಿನ ಕಡತ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಲೋಕಾಯುಕ್ತ ಪೊಲೀಸ್‌ ಇನಸ್ಪೆಕ್ಟರ್‌ ಪ್ರಭು ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಕಚೇರಿಯ ಎಲ್ಲಾ ವಿಭಾಗಗಳಲ್ಲಿನ ಕಡತ ಪರಿಶೀಲನೆ ನಡೆಸಿದರು.

ಶುಕ್ರವಾರ ಬೆಳಗ್ಗೆಯೇ ಭೇಟಿ ನೀಡಿದ ಲೋಕಾಯುಕ್ತರು ಮುಖ್ಯಾಧಿಕಾರಿಗಳ ಕಚೇರಿಗೆ ಧಾವಿಸಿ ಮುಖ್ಯಾಧಿಕಾರಿಗಳ ಪರ್ಸ್‌ ಪರಿಶೀಲಿಸಿ, ಮೊಬೈಲ್ ಪಡೆದು ಹಾಜರಾತಿ ಬುಕ್ ಜೊತೆಗೆ ಕಚೇರಿಗೆ ಸಾರ್ವಜನಿಕರಿಂದ ಬಂದ ಸಮಸ್ಯೆಗಳ ಅರ್ಜಿ ಪುಸ್ತಕ ಪರಿಶೀಲನೆ ಮಾಡಿದರು. ಆಶ್ರಯ ವಿಭಾಗ, ಎಂಜಿನಿಯರಿಂಗ್‌ ವಿಭಾಗ, ಕಂದಾಯ ವಿಭಾಗ, ಅರ್ಜಿ ಸ್ವೀಕಾರ ವಿಭಾಗ, ಸ್ವಚ್ಛತೆ ವಿಭಾಗ ಸೇರಿದಂತೆ ಪಂಚಾಯಿತಿ ಮೂಲ ಸೌಕರ್ಯ ಕಲ್ಪಿಸುವ ಎಲ್ಲಾ ವಿಭಾಗಗಳ ಪರಿಶೀಲನೆ ಮಾಡಿ ಅಲ್ಲಿಯೇ ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಪಿಐ ಪ್ರಭು ಸೂರಿನ್ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದು ಎಲ್ಲ ಕಡೆಯಲ್ಲೂ ಮಾಡುತ್ತೇವೆ. ಹಾಗೆಯೇ ಬೀಳಗಿ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಲಾಗಿದೆ. ಇಲಾಖೆವಾರು ಬಂದ ದೂರುಗಳ ಕುರಿತಾಗಿ ಎಲ್ಲಾ ರೀತಿಯ ದಾಖಲೆಗಳನ್ನು ನೋಡಿ, ಪಂಚಾಯಿತಿಗೆ ಬರುವ ಸಾರ್ವಜನಿಕರನ್ನು ಮಾತನಾಡಿಸಿ ಅವರು ಯಾವ ಕೆಲಸಕ್ಕೆ ಬಂದಿದ್ದಾರೆ. ಅವರ ಕೆಲಸ ಆಗಿದೆಯೋ ಇಲ್ಲವೋ ತಿಳಿದುಕೊಳ್ಳುವುದು ಮತ್ತು ಈಗಾಗಲೇ ಪಂಚಾಯತಿ ಎಲ್ಲಾ ದಾಖಲೆ, ಅರ್ಜಿಗಳ ಕುರಿತಾಗಿ ಆನ್‌ಲೈನ್ ವ್ಯವಸ್ಥೆ ಇದ್ದು ವಿಳಂಬವಾಗದೆ ಜನರ ಕೆಲಸಗಳು ಆಗಬೇಕು ಎಂದು ಸೂಚಿಸಲಾಗಿದೆ. ಇಲ್ಲಿನ ಪರಿಶೀಲನೆ ಎಲ್ಲ ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ರಾಘವೇಂದ್ರ ಮತ್ತು ಕಾಶಿಂಸಾಬ್ ಇಬ್ಬರು ಪಂಚ ಸಾಕ್ಷಿಗಳೊಂದಿಗೆ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ ಪ್ರಭು ಸೂರಿನ್‌, ಸಿಪಿಸಿಗಳಾದ ಧನರಾಜ್, ಗಿರೀಶ ಮತ್ತು ಎಸಿಪಿ ಸಂತೋಷ, ಮಹೇಶ ಅವರನ್ನು ಒಳಗೊಂಡ ತಂಡದ ಅಧಿಕಾರಿಗಳು ಇದ್ದರು.