3 ಕೆಜಿ ರಾಗಿ ಮುದ್ದೆ ತಿಂದು ಟಗರು ಗೆದ್ದ ಲೋಕೇಶ್

| Published : Sep 07 2025, 01:00 AM IST

ಸಾರಾಂಶ

ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅತಿಹೆಚ್ಚು ಮುದ್ದೆ ಸೇವಿಸುವವರಿಗೆ ಪ್ರಥಮ ಬಹುಮಾನ 15 ಸಾವಿರಕ್ಕೂ ಹೆಚ್ಚು ಮೌಲ್ಯದ ಟಗರು, ದ್ವಿತೀಯ ಬಹುಮಾನ 10 ಸಾವಿರ ರು. ನಗದು, ತೃತೀಯ ಬಹುಮಾನ 7 ಸಾವಿರ ನಗದು, ನಾಲ್ಕನೇ ಬಹುಮಾನವಾಗಿ ಟ್ರೋಫಿ ಘೋಷಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣೇಶೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ತಾಲೂಕಿನ ಕೆಂಚೇಗೌಡನಕೊಪ್ಪಲು ಗ್ರಾಮದ ಲೋಕೇಶ್ 3 ಕೆಜಿ ತೂಕದ 6 ರಾಗಿ ಮುದ್ದೆಗಳನ್ನು ಸೇವಿಸುವ ಮೂಲಕ ಪ್ರಥಮ ಬಹುಮಾನವಾಗಿ ಟಗರನ್ನು ಗೆದ್ದುಕೊಂಡರು.

ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಕಳೆದ 54 ವರ್ಷಗಳಿಂದ ಶ್ರೀರಾಮ ಯುವಕರ ಸಂಘ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಅವರೆ ಕಾಳು ಸಾರಿನ ಜೊತೆಗೆ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅತಿಹೆಚ್ಚು ಮುದ್ದೆ ಸೇವಿಸುವವರಿಗೆ ಪ್ರಥಮ ಬಹುಮಾನ 15 ಸಾವಿರಕ್ಕೂ ಹೆಚ್ಚು ಮೌಲ್ಯದ ಟಗರು, ದ್ವಿತೀಯ ಬಹುಮಾನ 10 ಸಾವಿರ ರು. ನಗದು, ತೃತೀಯ ಬಹುಮಾನ 7 ಸಾವಿರ ನಗದು, ನಾಲ್ಕನೇ ಬಹುಮಾನವಾಗಿ ಟ್ರೋಫಿ ಘೋಷಿಸಲಾಗಿತ್ತು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 30 ಜನರ ಪೈಕಿ ತಾಲೂಕಿನ ಕೆಂಚೇಗೌಡನಕೊಪ್ಪಲು ಗ್ರಾಮದ ಲೋಕೇಶ್ 3 ಕೆ.ಜಿ.ತೂಕದ 6 ರಾಗಿಮುದ್ದೆ ಸೇವಿಸಿ ಪ್ರಥಮ ಬಹುಮಾನ ಪಡೆದುಕೊಂಡರೆ, ದೊಂದೆಮಾದಹಳ್ಳಿ ನವೀನ್ 2.75 ಕೆ.ಜಿ.ತೂಕದ ಮುದ್ದೆ ಸೇವಿಸಿ ದ್ವಿತೀಯ ಬಹುಮಾನ ಪಡೆದುಕೊಂಡರು.

ಪಾಲಗ್ರಹಾರದ ಶರತ್‌ಕುಮಾರ್ 2.5 ಕೆ.ಜಿ. ತೂಕದ ಮುದ್ದೆ ಸೇವಿಸಿ ತೃತೀಯ ಸ್ಥಾನ, ಕುಪ್ಪಹಳ್ಳಿ ರಾಜಣ್ಣ 2 ಕೆಜಿ ತೂಕದ ರಾಗಿ ಮುದ್ದೆ ತಿಂದು ನಾಲ್ಕನೇ ಸ್ಥಾನದ ಬಹುಮಾನ ಪಡೆದುಕೊಂಡರು. ದೊಂದೆಮಾದಹಳ್ಳಿ ಗ್ರಾಮದ ಅರುಣ್ ಸಮಾಧಾನಕರ ಬಹುಮಾನ ಪಡೆದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಗ್ರಾಮೀಣ ಸೊಗಡಿನ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯನ್ನು ಕಣ್ತುಂಬಿಕೊಂಡು ಪ್ರೋತ್ಸಾಹಿಸಲು ಸುತ್ತಮುತ್ತಲಿನ ಗ್ರಾಮಗಳ ಸಾವಿರಕ್ಕೂ ಹೆಚ್ಚು ಜನರು ನೆರೆದಿದ್ದರು.

ಗ್ರಾಮದ ಮುಖಂಡರಾದ ಪಿ.ಡಿ.ತಿಮ್ಮಯ್ಯ, ರಮೇಶ್, ರಾಮಚಂದ್ರು, ಆನಂದ್, ವಕೀಲ ಮಂಜುನಾಥ್, ಮೂರ್ತಿ, ಶ್ರೀರಾಮ ಯುವಕರ ಸಂಘದ ಮಂಜುನಾಥ್, ಲೋಕೇಶ್, ನವೀನ್, ವಿನಯ್‌ಕುಮಾರ್, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.