ಹೋಂ ಸ್ಟೇ ಹಾಗೂ ವೀರಪ್ಪಗೌಡರ ಮನೆ ಬಳಿ ದಾಂಧಲೇ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಸುತ್ತಮುತ್ತ ಒಂಟಿ ಸಲಗ ದಾಳಿಯಿಟ್ಟಿದ್ದು ವೀರಪ್ಪಗೌಡರ ಬಾಳೆಗಿಡಗಳನ್ನು ತುಳಿದು ನಾಶ ಮಾಡಿ ಅಪಾರ ನಷ್ಟ ಉಂಟಾಗಿದೆ.

ಮಂಗಳವಾರ ದೇವನಗೂಲ್ ರವಿ ಅವರ ಸುತ್ತಮುತ್ತ ಓಡಾಡಿಕೊಂಡಿದ್ದ ಕಾಡಾನೆ ಆಚಾರ್ ಕಾಲೋನಿ ಮೂಲಕ ಶಿವಣ್ಢ ಅವರ ಹೋಂ ಸ್ಟೇ ಹಾಗೂ ವೀರಪ್ಪಗೌಡರ ಮನೆ ಬಳಿ ದಾಂಧಲೇ ನಡೆಸಿದೆ. ಈಗ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಕಾಡಾನೆಯ ದೇಹದಿಂದ ರಸ್ತೆಯುದ್ದಕ್ಕೂ ರಕ್ತ ಸುರಿದಿದ್ದು. ಕಾಡಾನೆಗೆ ದೇಹಕ್ಕೆ ಗಾಯವಾಗಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಕಾಡಾನೆ ಸಂಚರಿಸುವುದರಿಂದ ಗಾಯದ ಬಗ್ಗೆ ಮಾಹಿತಿ ತಿಳಿದಿಲ್ಲ. ಆದರೆ ರಸ್ತೆಯುದ್ದಕ್ಕೂ ಕಾಡಾನೆ ಸಂಚರಿಸಿದ ಕಾರಣ ರಕ್ತದ ಕಲೆಗಳಿವೆ. ಶಿವಣ್ಣ ಅವರ ಹೋಂ ಸ್ಟೇ ಮುಂದೆ ಕಾಡಾನೆ ನಿಂತಿದೆ. ದೇವನಗೂಲ್ ಗುಡ್ಡ,ಮಲಯ ಮಾರುತ ಮತ್ತಿತರ ಪ್ರದೇಶದಲ್ಲಿ ಈ ಕಾಡಾನೆ ಆಗಾಗ ಪ್ರತ್ಯಕ್ಷವಾಗುತ್ತಿದೆ.


ಕಾಡಾನೆ ಹಲವು ಬಾರಿ ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸುತ್ತಿದೆ. ಈ ಹಿಂದೆ ರಿಚರ್ಡ್ ಲೋಬೊ ಅವರ ತೋಟಕ್ಕೆ ಕಾಡಾನೆ ಲಗ್ಗೆ ಇಡುತ್ತಿದ್ದು ಈಗ ಅವರು ವಿದ್ಯುತ್ ಬೇಲಿ ಮಾಡಿರುವುದರಿಂದ ಕಾಡಾನೆ ಆ ಕಡೆ ಸಾಗದೇ ಗ್ರಾಮಕ್ಕೆ ನುಗ್ಗಿ ಕೃಷಿ ಕಾರ್ಮಿಕರನ್ನು ಬೆಚ್ಚಿ ಬೀಳಿಸಿದೆ. ಕಾಡಾನೆ ದೇವನಗೂಲ್ ಗ್ರಾಮದಲ್ಲಿ ಬೀಡು ಬಿಟ್ಟಿರುವುದರಿಂದ ಗ್ರಾಮಸ್ಥರು ಪೇಟೆಗೆ ಹೋಗಲು ಭಯ ಪಡುವಂತಾಗಿದೆ. ಬುಧವಾರ ರಾತ್ರಿ ದೇವನಗೂಲ್ ನಮ್ಮ ಮನೆ ಬಳಿ ಕಾಡಾನೆ ಬಂದು ಕಾಪಿ ಗಿಡ, ಬಾಳೆಗಿಡಗಳನ್ನು ತುಳಿದು ನಾಶ ಪಡಿಸಿದ್ದರಿಂದ ನಷ್ಟವಾಗಿದೆ.ಅರಣ್ಯ ಇಲಾಖೆಯವರು ಈ ಕಾಡಾನೆ ಸ್ಥಳಾಂತರಿಸಬೇಕು ಎಂದು ದೇವನಗೂಲ್ ಗ್ರಾಮಸ್ಥ ವೀರಪ್ಪಗೌಡ ಆಗ್ರಹಿಸಿದ್ದಾರೆ.''''''''''''''''

-- ಕೋಟ್‌ --

ಕಾಡಾನೆ ದೇವನಗೂಲ್ ಭಾಗದಲ್ಲಿ ಇರುವುದು ಗಮನಕ್ಕೆ ಬಂದಿದೆ ಹಾಗೂ ಕಾಡಾನೆಗೆ ಗಾಯವಾಗಿ ರಕ್ತ ರಸ್ತೆಯಲ್ಲಿ ಸುರಿಯುತ್ತಿರುವ ಬಗ್ಗೆ ಮಾಹಿತಿ ಬಂದಿಲ್ಲ. ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಚಲನವಲನದ ಬಗ್ಗೆ ಗಮನ ಹರಿಸಲಿದೆ. ಖಾಸಗಿಯವರ ಕಾಫಿ ತೋಟಕ್ಕೆ ವಿದ್ಯುತ್ ಬೇಲಿ ಅಳವಡಿಸಿರುವುದರಿಂದ ಭಯಗೊಂಡು ಅದು ಕಾಡಿಗೆ ಹೋಗುತ್ತಿಲ್ಲ ಎಂದೆನಿಸುತ್ತದೆ. ಕಾರ್ಯಾಚರಣೆ ಮಾಡುವ ವೇಳೆ ವಿದ್ಯುತ್ ಬೇಲಿ ಆಫ್ ಮಾಡಿಸಿ ಕಾಡಾನೆ ಓಡಿಸಲಾಗುವುದು.

- ರಂಜಿತ್. ಉಪ ವಲಯ ಅರಣ್ಯಾಧಿಕಾರಿ