ಮರಿಯಮ್ಮನಹಳ್ಳಿಯ ಬಹುದಿನದ ಕನಸು ನನಸು: ಶಾಸಕ ನೇಮಿರಾಜ ನಾಯ್ಕ್‌

| Published : Mar 12 2024, 02:04 AM IST

ಮರಿಯಮ್ಮನಹಳ್ಳಿಯ ಬಹುದಿನದ ಕನಸು ನನಸು: ಶಾಸಕ ನೇಮಿರಾಜ ನಾಯ್ಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಮೃತ್‌ 2 ಯೋಜನೆಯ ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬವಾಗದೇ ಗುತ್ತಿಗೆದಾರರಿಗೆ ನೀಡಿದ ಅವಧಿಯಲ್ಲಿಯೇ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮುಗಿಸಲಿದ್ದಾರೆ.

ಮರಿಯಮ್ಮನಹಳ್ಳಿ: ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿರುವ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಅಮೃತ್‌ -2 ಯೋಜನೆಯ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದ್ದು, ಮರಿಯಮ್ಮನಹಳ್ಳಿಯ ಬಹುದಿನದ ಕನಸು ನನಸಾಗುವ ದಿನಗಳು ಬಂದಿದೆ. ಇನ್ನು ಕುಡಿವ ನೀರಿಗೆ ಸಮಸ್ಯೆ ಇರಲ್ಲ ಎಂದು ಶಾಸಕ ಕೆ.ನೇಮಿರಾಜ್‌ ನಾಯ್ಕ್‌ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಅಮೃತ್‌- 2 ಯೋಜನೆಯ ₹77 ಕೋಟಿ ವೆಚ್ಚದ ಮರಿಯಮ್ಮನಹಳ್ಳಿಗೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿವ ನೀರಿನ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಅಮೃತ್‌ 2 ಯೋಜನೆಯ ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬವಾಗದೇ ಗುತ್ತಿಗೆದಾರರಿಗೆ ನೀಡಿದ ಅವಧಿಯಲ್ಲಿಯೇ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮುಗಿಸಲಿದ್ದಾರೆ. ಉತ್ತಮ ಗುಣಮಟ್ಟದ ಪೈಪ್‌ಲೈನ್ ಗಳನ್ನು ಅಳವಡಿಸಿ ಪ್ರತಿಯೊಂದು ವಾರ್ಡಿಗೂ ಹೊಸ ಪೈಪ್‌ ಲೈನ್‌ ಅಳವಡಿಸಿ ಕುಡಿಯುವ ನೀರಿನ್ನು ಪ್ರತಿ ಮನೆಗೂ ಒದಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವರು ಸೂಚಿಸಿದರು.ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರ ಕೆರೆಯ ಜನರು ಅಂದು ತಮ್ಮ ಮನೆ, ಆಸ್ತಿ, ಹೊಲಗಳನ್ನು ಬಿಟ್ಟು ಮರಿಯಮ್ಮನಹಳ್ಳಿಗೆ ಬಂದು ನೆಲೆಸಿದ್ದರು. ಅಂದಿನಿಂದ ಸುಮಾರು 70 ವರ್ಷಗಳ ಕಾಲ ಮರಿಯಮ್ಮನಹಳ್ಳಿಯ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸಿದ್ದರು. ಅಮೃತ್‌-2 ಯೋಜನೆಯಲ್ಲಿ ತುಂಗಭದ್ರಾ ಜಲಾಶಯದಿಂದ ಮರಿಯಮ್ಮನಹಳ್ಳಿಯ ಜನರ ಪ್ರತಿ ಮನೆಗೂ ನಿತ್ಯ ಶಾಶ್ವತ ಕುಡಿಯುವ ನೀರಿನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.ನಾನು ಮರಿಯಮ್ಮನಹಳ್ಳಿಯ ನಿವಾಸಿಯಾಗಿದ್ದು, ನಮ್ಮ ಊರಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಅನೇಕ ವರ್ಷಗಳ ಕಾಲ ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಅದನ್ನು ಅನುಭವಿಸಿದ್ದೇವೆ. ಈಗ ದೇವರ ದಯೆಯಿಂದ ಮತ್ತೊಮ್ಮೆ ಜನರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ, ಕುಡಿಯುವ ನೀರಿನ ಸಮಸ್ಯೆಯು ನನ್ನ ಅವಧಿಯಲ್ಲೇ ಬಗೆಹರಿಸಿ ಪ್ರತಿ ಮನೆಗೂ ಶುದ್ಧ ನೀರು ನೀಡುವಂತಹ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಅವರು ಹೇಳಿದರು.ಪ್ರತಿ ವಾರ್ಡಿಗೂ ಉತ್ತಮ ಸಿಮೆಂಟ್‌ ರಸ್ತೆ, ಚರಂಡಿ, ಹೈಮಾಸ್ಕ್‌ ದೀಪಗಳ ಅಳವಡಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಮಾದರಿ ಪಟ್ಟಣವನ್ನಾಗಿ ರೂಪಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಲಹೆ ನೀಡಿ, ಅಭಿವೃದ್ಧಿಗೆ ಸಹಕಾರವಿರಲಿ ಎಂದು ಅವರು ಹೇಳಿದರು.ಹಗರಿಬೊಮ್ಮನಹಳ್ಳಿ ಕ್ಷೇತ್ರ ಸಮಗ್ರ ಅಭಿವೃದ್ಧಿ ವಿವಿಧ ಯೋಜನೆಗಳಲ್ಲಿ ಸುಮಾರು ₹450 ಕೋಟಿ ಅನುದಾನ ಬಂದಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮರಿಯಮ್ಮನಹಳ್ಳಿ, ಹಗರಿಹೊಮ್ಮನಹಳ್ಳಿ, ಕೊಟ್ಟೂರು ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.ಮರಿಯಮ್ಮನಹಳ್ಳಿ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಕಾರ್ಯದರ್ಶಿ ಚಿದ್ರಿ ಸತೀಶ್‌, ಹೋರಾಟ ಸಮಿತಿಯ ಸದಸ್ಯರಾದ ಗರಗ ಪ್ರಕಾಶ್‌ ಪೂಜಾರ್‌, ಬಿಎಂಎಸ್‌ ಪ್ರಕಾಶ್‌, ಎಂ. ವೆಂಕಟೇಶ್‌, ಕೆ. ರಘುವೀರ್‌, ಸಜ್ಜದ್‌ ವಿಶ್ವನಾಥ, ಚುಕ್ಕಿ ನಾಗೇಶ್‌, ಕೆ.ಗೋಪಾಲ್‌, ಸ್ಥಳೀಯ ಮುಖಂಡರಾದ ಗುಂಡಾಸ್ವಾಮಿ, ಎಲೆಗಾರ್‌ ಮಂಜುನಾಥ, ಈಡಿಗರ ಎರ್ರಿಸ್ಬಾಮಿ, ಎಸ್‌. ನವೀನ್‌, ಬಾದಾಮಿ ಮೃತ್ಯುಂಜಯ, ವೈ.ಮಲ್ಲಿಕಾರ್ಜುನ, ಪಿ.ಸೂರ್ಯಬಾಬು, ಪಿ.ಒಬಪ್ಪ, ಬಿ.ಎಸ್‌. ರಾಜಪ್ಪ, ನಂದೀಶ್‌, ರಾಘವೇಂದ್ರ, ವೆಂಕಟೇಶ್‌, ದುರುಗಪ್ಪ ಉಪಸ್ಥಿತರಿದ್ದರು.