ಸಾರಾಂಶ
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಗೌರವ, ಸೇನೆಗೆ ನೈತಿಕ ಬೆಂಬಲ
ಕನ್ನಡಪ್ರಭ ವಾರ್ತೆ ಉಡುಪಿಪಹಲ್ಗಾಮ್‌ನಲ್ಲಿ ಪಾಕ್ ಉಗ್ರರ ದಾಳಿಗೆ ಬಲಿಯಾದ ಅಮಾಯಕ ಭಾರತೀಯರಿಗೆ ಗೌರವ ಸಲ್ಲಿಸಲು, ಈ ದಾಳಿಯ ಸೇಡನ್ನು ಸಮರ್ಥವಾಗಿ ತೀರಿಸಿದ ಭಾರತದ ವೀರಯೋಧರಿಗೆ ಅಭಿನಂದನೆ ಸಲ್ಲಿಸುವ ಮತ್ತು ಅವರಿಗೆ ನೈತಿಕ ಧೈರ್ಯ ವ್ಯಕ್ತಪಡಿಸುವ ಭವ್ಯ ತಿರಂಗಾ ಯಾತ್ರೆ ಮಂಗಳವಾರ ಉಡುಪಿ ನಗರದಲ್ಲಿ ನಡೆಯಿತು.ಉಡುಪಿಯ ರಾಷ್ಟ್ರ ರಕ್ಷಣಾ ಸಮಿತಿ ಆಯೋಜಿಸಿದ್ದ ಈ ಪಾದಯಾತ್ರೆಯಲ್ಲಿ ವಿವಿಧ ಸಂಘಟನೆಗಳ ಸಾವಿರಾರು ಮಂದಿ ಕಾರ್ಯಕರ್ತರು ಸುರಿಯುತ್ತಿದ್ದ ಮಳೆಯ ನಡುವೆ ಜೋಡುಕಟ್ಟೆಯಿಂದ ನಗರದ ಜಟ್ಕಾ ಸ್ಟಾಂಡ್ ವರೆಗೆ 90 ಮೀಟರ್ ಉದ್ದದ ತಿರಂಗ ಧ್ವಜವನ್ನು ಹಿಡಿದು ಹೆಜ್ಜೆ ಹಾಕಿದರು.ನಿವೃತ್ತ ಪ್ರಾಂಶುಪಾಲೆ ಕ್ಯಾ. ಸುಕನ್ಯಾ ಮಾರ್ಟಿಸ್ ಪಾದಯಾತ್ರೆಗೆ ಚಾಲನೆ ನೀಡಿದರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ನಂತರ ಜಟ್ಕಾ ಸ್ಟಾಂಡ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಿವೃತ್ತ ಸೇನಾಧಿಕಾರಿ ಕರ್ನಲ್ ಎಫ್.ಎ. ರಾಡ್ರಿಗ್ಸ್, ಭಾರತದ ಜೊತೆಗೆ 3 ಬಾರಿ ಯುದ್ಧದಲ್ಲೂ ಸೋತ ಮೇಲೆ ಪಾಕಿಸ್ತಾನ, ಈ ರೀತಿ ತಾನು ಗೆಲ್ಲುವುದು ಸಾಧ್ಯವಿಲ್ಲ ಎಂದು ಅರಿತು ಉಗ್ರಗಾಮಿಗಳ ಮೂಲಕ ದಾಳಿ ಮಾಡಿಸುತ್ತಿದೆ. ಪಾಕಿಸ್ತಾನ ಮೊದಲಿಂದಲೂ ಹೇಡಿ ರಾಷ್ಟ್ರ, ಭಾರತವನ್ನು ಸೋಲಿಸುವುದು ಬಿಡಿ, ತನ್ನ ಬಳಿ ಪರಮಾಣು ಅಸ್ತ್ರ ಇದೆ ಎನ್ನುವ ಪಾಕಿಸ್ತಾನಕ್ಕೆ ಅದನ್ನು ಬಳಸುವ ಧೈರ್ಯ ಕೂಡ ಇಲ್ಲ ಎಂದರು.ಜಿಲ್ಲಾ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಸುರೇಶ್ ರಾವ್ ಬಾರ್ಕೂರು, ಪಾಕಿಸ್ತಾನದ ವಿರುದ್ಧ ಭಾರತದ ಯುದ್ಧ ನಿಂತಿಲ್ಲ, ಇದು ಕೇವಲ ವಿರಾಮ ಅಷ್ಟೇ. ಭಯೋತ್ಪಾದನೆಯನ್ನು ಭಾರತ ಎಂದೂ ಸಹಿಸುವುದಿಲ್ಲ. ಮೊನ್ನೆ ಯುದ್ಧ ಮುಂದುವರಿಯುತ್ತಿದ್ದರೆ ಪಾಕಿಸ್ತಾನ ಇಂದು ಭೂಪಟದಲ್ಲಿಯೇ ಇರುತ್ತಿರಲಿಲ್ಲ ಎಂದು ಹೇಳಿದರು.ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ಪ್ರವೀಣ ಡಿಸೋಜ ಮಾತನಾಡಿದರು. ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಸ್ವಾಗತಿಸಿದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಶ್ರೀನಿಧಿ ಹೆಗ್ಡೆ, ವೀಣಾ ಎಸ್. ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಶ್ರೀಶಾ ನಾಯಕ್ ಪೆರ್ಣಂಕಿಲ, ಶ್ರೀಕಾಂತ್ ನಾಯಕ್, ತಾರಾ ಯು.ಆಚಾರ್ಯ, ನಯನಾ ಗಣೇಶ್, ಗೀತಾಂಜಲಿ ಸುವರ್ಣ, ಪೂರ್ಣಿಮಾ ಸುರೇಶ್ ನಾಯಕ್ ಮುಂತಾದವರಿದ್ದರು.