ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ರಫ್ತು ವಿಭಾಗದಿಂದ ಬಳ್ಳಾರಿಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಆಯ್ಕೆ ಮಾಡಲಾಗಿದೆ
ಬಳ್ಳಾರಿ: ಜೀನ್ಸ್ ಉದ್ಯಮಿದಾರರು ರಫ್ತು ವಲಯಕ್ಕೆ ಪ್ರವೇಶಿಸಲು ಮುಂದಾದರೆ, ಅವರನ್ನು ಪೂರ್ಣ ಪ್ರಮಾಣದ ರಫ್ತುದಾರರನ್ನಾಗಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ಹಾಗೂ ಬೆಂಬಲ ನೀಡಲು ಸಿದ್ಧವಾಗಿವೆ ಎಂದು ಕಲಬುರಗಿ ಉತ್ತರ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ. ವಿಠಲರಾಜು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಾಣ್ಯಿಜ್ಯೋದ್ಯಮ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ಜವಳಿ/ಜೀನ್ಸ್ ವಲಯದ ಉದ್ದಿಮೆದಾರರಿಗೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ‘ರಫ್ತು ಪ್ರೋತ್ಸಾಹ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಉತ್ಪಾದನೆಗೆ ಸೀಮಿತವಾಗದೆ ರಫ್ತು ಮಾಡುವ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನವನ್ನು ಉದ್ಯಮಿದಾರರು ಬೆಳೆಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಉತ್ಪನ್ನ ಕಳುಹಿಸಲು ನಿರ್ದಿಷ್ಟ ಕಾರ್ಯ ವಿಧಾನ ಮತ್ತು ಗುಣಮಟ್ಟ ಅತ್ಯಂತ ಪ್ರಮುಖವಾಗಿದೆ ಎಂದರು.ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಮಹಂತೇಶ ಕೆ.ಜಿ. ಕಂಚಿಮಠ ಮಾತನಾಡಿ, ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ರಫ್ತು ವಿಭಾಗದಿಂದ ಬಳ್ಳಾರಿಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಆಯ್ಕೆ ಮಾಡಲಾಗಿದ್ದು, ರಾಜ್ಯದಲ್ಲಿ ಒಟ್ಟು ನಾಲ್ಕು ಜಿಲ್ಲೆಗಳನ್ನು ಈ ಯೋಜನೆಗೆ ಗುರುತಿಸಲಾಗಿದ್ದು, ಅವುಗಳಲ್ಲಿ ಬಳ್ಳಾರಿಯೂ ಒಂದಾಗಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮಕ್ಕೆ ಅಪಾರ ಅವಕಾಶಗಳಿವೆ. ಪ್ರಸ್ತುತ ಇಲ್ಲಿನ ಸ್ಥಳೀಯ ಉದ್ಯಮಿಗಳು ತಮ್ಮ ವ್ಯವಹಾರವನ್ನು ದೇಶೀಯ ಹಾಗೂ ಪ್ರಾದೇಶಿಕ ಮಾರುಕಟ್ಟೆಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಇವರಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮಾಡುವ ಸಾಮರ್ಥ್ಯವಿದ್ದರೂ, ರಫ್ತು ಪ್ರಕ್ರಿಯೆಯ ಬಗ್ಗೆ ಸೂಕ್ತ ಮಾಹಿತಿಯ ಕೊರತೆ ಇದೆ. ಈ ಕೊರತೆ ನೀಗಿಸಲು ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ತಜ್ಞರಿಂದ ರಫ್ತು ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅವ್ವಾರು ಮಂಜುನಾಥ, ಕೇವಲ ಗುಣಮಟ್ಟದ ಉತ್ಪನ್ನ ತಯಾರಿಸುವುದಷ್ಟೆ ಅಲ್ಲದೆ, ಜಾಗತಿಕ ಮಾರುಕಟ್ಟೆಗೆ ತಲುಪಲು ಅಗತ್ಯವಿರುವ ಅಂಶಗಳಾದ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಮಾಣೀಕರಣ, ಸುಧಾರಿತ ಪ್ಯಾಕೇಜಿಂಗ್ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆ, ವಿದೇಶಿ ವ್ಯಾಪಾರ ನಿಯಮ ಹಾಗೂ ರಫ್ತು ದಾಖಲಾತಿ ಪ್ರಕ್ರಿಯೆ, ವಿದೇಶಿ ಖರೀದಿದಾರರನ್ನು ಸಂಪರ್ಕಿಸುವ ವಿಧಾನ, ಸರ್ಕಾರದಿಂದ ಸಿಗುವ ರಫ್ತು, ಸವಲತ್ತು ಮತ್ತು ಪ್ರೋತ್ಸಾಹಕಗಳ ಕುರಿತು ಅರಿವು ಹೊಂದಬೇಕಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿ ವಿಜ್ಞಾನಿ ಡಾ. ಪಿ. ಕುಮಾರೇಶನ್, ಎಇಪಿಸಿ ಉಪನಿರ್ದೇಶಕ ಪಿ. ದೊರೆಬಾಬು, ಲೋಕೇಶ್ವರಿ ಎಸ್. ಗೌಡ, ಡಾ. ನಾಗವೇಣಿ ಸಿ., ಹಾಗೂ ಡಿಬಿಎಸ್ ಬ್ಯಾಂಕ್ ಇಂಡಿಯಾದ ಮಣಿವರ್ಮಾ ಜಿ. ಅವರು ಉಪನ್ಯಾಸ ನೀಡಿದರು.ಬಳ್ಳಾರಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ವಿ. ರಾಮಚಂದ್ರ, ಹಿರಿಯ ಲೆಕ್ಕಪರಿಶೋಧಕ ಪನ್ನರಾಜ್ ಸಿರಿಗೇರಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಿರೀಶ ವಿ. ಕುಲಕರ್ಣಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಎನ್. ಲಮಾಣಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಗಾರ್ಮೆಂಟ್ಸ್, ಕೈಮಗ್ಗ ನೇಕಾರರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.