ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ನಿಂದ ಲೂಟಿ

| Published : Apr 17 2024, 01:20 AM IST

ಸಾರಾಂಶ

ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಪರೋಕ್ಷ ಲೂಟಿಯನ್ನು ಜನರ ಮುಂದಿಟ್ಟು ಮತಯಾಚನೆ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿ ಪ್ರಚಂಡ ಗೆಲುವಿಗೆ ಮುನ್ನುಡಿ ಬರೆಯೋಣ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಪರೋಕ್ಷ ಲೂಟಿಯನ್ನು ಜನರ ಮುಂದಿಟ್ಟು ಮತಯಾಚನೆ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿ ಪ್ರಚಂಡ ಗೆಲುವಿಗೆ ಮುನ್ನುಡಿ ಬರೆಯೋಣ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.

ಪಕ್ಷದ ಮುಖಂಡರು ಹಾಗೂ ವಿವಿಧ ವಾರ್ಡ್‌ಗಳ ನಗರಸಭೆ ಸದಸ್ಯರೊಂದಿಗೆ ಮಾರುತಿ ನಗರ ಬಡಾವಣೆಯ ನಗರಸಭೆ ಜೆಡಿಎಸ್ ಸದಸ್ಯೆ ಸುಜಾತಾ ರಮೇಶ್ ನಿವಾಸದಲ್ಲಿ ಮಾತನಾಡಿದರು. ಕಟ್ಟಡ, ಆಸ್ತಿ ತೆರಿಗೆ, ಅಬಕಾರಿ, ದವಸ, ಧಾನ್ಯಗಳ ಬೆಲೆ ಹೆಚ್ಚಳ ಒಳಗೊಡಂತೆ ಎಲ್ಲ ರೀತಿಯಲ್ಲಿಯೂ ಬಡವರ ಜೇಬು ಖಾಲಿ ಮಾಡಿದ್ದಾರೆ. ಒಂದು ಕೈಲಿ ಕೊಡುವಂತೆ ತೋರಿಸಿ ಮತ್ತೊಂದು ಕಡೆಯಿಂದ ಸುಲಿಗೆ ಮಾಡುತ್ತಿರುವುದು ಜಗಜ್ಜಾಹಿರಾಗಿದೆ. ಇದರೊಂದಿಗೆ ರಾಜ್ಯದೆಲ್ಲಡೆ ಬಂತೆ ಬರ ಸನ್ನಿವೇಶ ವಕ್ಕರಿಸಿದ್ದು ಪರಿಸ್ಥಿತಿ ನಿಭಾಯಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಸದ್ಯದ ಸನ್ನಿವೇಶದಲ್ಲಿ ಕುಡಿಯುವ ನೀರಿಗೆ ಜನ, ಜಾನುವಾರು ತತ್ವಾರ ಪಡುತ್ತಿದ್ದು ನರಕ ಸೃಷ್ಟಿಸಿದೆ. ಇಂತಹ ಎಲ್ಲ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಡಿಸಿ ಮತಯಾಚಿಸಿ ದೊಡ್ಡ ಅಂತರದ ಗೆಲುವ ಸಾಧಿಸೋಣ ಎಂದು ಕರೆ ನೀಡಿದರು.

ಭವ್ಯ ಭಾರತ ನಿರ್ಮಾಣಕ್ಕೆ ಶಕ್ತಿ ನೀಡೋಣ:

ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ವಿಶ್ವ ಮಾನ್ಯತೆ ದೊರೆತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆರೋಗ್ಯ, ಮೂಲ ಸೌಕರ್ಯ ಕಲ್ಪಿಸುವುದು, ಶಿಕ್ಷಣ, ಜ್ಞಾನ, ವಿಜ್ಞಾನ ಒಳಗೊಂಡಂತೆ ಎಲ್ಲ ಬಗೆಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆತಿದೆ ಎನ್ನುವುದನ್ನು ಮನೆ, ಮನಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ, ವಂದೇ ಭಾರತ್ ರೈಲು ಸೇವೆ ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ, ಆಯುಷ್ಮಾನ್ ಭಾರತ್, ಕೃಷಿ ಸಮ್ಮಾನ್, ಉದ್ಯಮಿ, ರೈತ ಹಾಗೂ ಜನಪರ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದ ಭವ್ಯ ಭವಿಷ್ಯದ ನಿರ್ಮಾಣ ಮಾಡುವ ಸಂಕಲ್ಪಕ್ಕೆ ಶಕ್ತಿ ನೀಡೋಣ ಎಂದು ಉತ್ಸಾಹ ತುಂಬಿದರು.ಇತ್ತೀಚೆಗೆ ತುಮಕೂರಿನ ಸಭೆಯಲ್ಲಿ ಕಾಂಗ್ರೆಸ್ಸಿಗರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಹಲ್ಲೆ ನಡೆಸಲು ಕಾಣದ ಕೈಗಳು ಕುಮ್ಮಕ್ಕು ನೀಡಿರುವ ಅನುಮಾನವಿದೆ. ಸುಖಾಸುಮ್ಮನೇ ಮಹಿಳೆಯರ ಗುಂಪು ವೇದಿಕೆಗೆ ನುಗ್ಗಿದ್ದು ಅಕ್ಷಮ್ಯ.

ಇಡೀ ಪ್ರಕರಣದ ಸಂಪೂರ್ಣ ತನಿಖೆ ನಡೆದಲ್ಲಿ ಕುತಂತ್ರ ಬಯಲಾಗಲಿದೆ. ಹಿರಿಯ ಹಾಗೂ ಮುತ್ಸದ್ಧಿ ರಾಜಕರಣಿಗೆ ಅವಮಾನ ಮಾಡಿದ್ದು ಅಕ್ಷಮ್ಯ. ಲೋಕಸಭಾ ಚುನಾವಣೆಯಲ್ಲಿ ಮತದಾರರು ರಾಜಕೀಯ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಮನವರಿಕೆ ಮಾಡಿಕೊಟ್ಟು ಮತಯಾಚಿಸಿ ಗೆಲುವು ಸಾಧಿಸೋಣ ಎಂದರು. ನಗರ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ನಡೆಸಬೇಕಾದ ಪ್ರಚಾರ ಕಾರ್ಯತಂತ್ರ ಕುರಿತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಲಾಗಿದೆ.

ನನ್ನ ಬೂತ್ ನನ್ನ ಗೆಲುವು ಮಾನದಂಡದ ಅಡಿಯಲ್ಲಿ ಎಲ್ಲರೂ ಸಕ್ರಿಯರಾಗಿ ಕೆಲಸ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗೊತ್ತಿ ಅಭೂತಪೂರ್ವ ಮುನ್ನಡೆಗಳಿಸಲು ಸಂಕಲ್ಪ ಮಾಡೋಣ ಎಂದು ಹೇಳಿದರು. ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಜಿಲ್ಲಾ ವಕ್ಪ್‌ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ನಗರಸಭೆ ಸದಸ್ಯರಾದ ಈಶ್ವರಪ್ಪ, ಸುಜಾತಾ ರಮೇಶ್, ಮೇಲುಗಿರಿಗೌಡ, ಹರ್ಷವರ್ಧನ್‌ರಾಜ್, ಚಂದ್ರಶೇಖರ್, ದರ್ಶನ್ ದಾಸ ಹಾಗೂ ಹಲವರು ಸಂಘಟನೆ ಹಾಗೂ ಪ್ರಚಾರ ಕುರಿತು ವಿಚಾರ ವಿನಿಮಯಮಾಡಿಕೊಂಡರು.