ಸಾರಾಂಶ
ಸುಮಾರು ₹187 ಕೋಟಿ ಹಣ ಪರಿಶಿಷ್ಟ ಪಂಗಡದವರಿಗೆ ನೀಡುವ ಬದಲು ತಮ್ಮ ಜೇಬಿಗೆ ಇಳಿಸಿಕೊಂಡಿದ್ದು ಖಂಡನೀಯ
ಗದಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಾಕಷ್ಟು ಪ್ರಮಾಣದ ಹಗರಣ ಮಾಡಿದೆ. ಜತೆಗೆ ಹಗರಣಗಳ ತನಿಖೆ ಕೂಡ ನಿಷ್ಪಕ್ಷಪಾತವಾಗಿ ನಡೆಸುತ್ತಿಲ್ಲ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಗಂಭೀರವಾಗಿ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಈಗಾಗಲೇ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿ ಜೈಲಿನಲ್ಲಿದ್ದಾರೆ. ಸುಮಾರು ₹187 ಕೋಟಿ ಹಣ ಪರಿಶಿಷ್ಟ ಪಂಗಡದವರಿಗೆ ನೀಡುವ ಬದಲು ತಮ್ಮ ಜೇಬಿಗೆ ಇಳಿಸಿಕೊಂಡಿದ್ದು ಖಂಡನೀಯ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಹಗರಣವಾದಾಗ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಈಗಿನ ಸಿಎಂ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದರು. ಆದರೆ, ಈಗ ತಮ್ಮದೇ ಸರ್ಕಾರದ ವಿರುದ್ಧ ಹಗರಣ ನಡೆದ ಆರೋಪ ಕೇಳಿ ಬಂದಿದ್ದು ಸಿಎಂ ಯಾಕೆ ರಾಜೀನಾಮೆ ನೀಡಬಾರದು? ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮಹೇಶ್ ರೋಖಡೆ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಕಿರಣ್ ಹಿರೇಮಠ, ವೆಂಕಟೇಶ ದೊಡ್ಡಮನಿ, ಶಿವಯೋಗಿ ಹಿರೇಮಠ ಸೇರಿದಂತೆ ಶ್ರೀರಾಮ ಸೇನೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.