ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಲೂಟಿ

| Published : Oct 31 2023, 01:15 AM IST

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಲೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ಕಾರ್ಮಿಕರ ಮಂಡಳಿಯಿಂದ ಆರೋಗ್ಯ ತಪಾಸಣೆ ಹೆಸರಿನಲ್ಲಿ 33 ಜಿಲ್ಲೆಗಳಿಗೆ ₹330 ಕೋಟಿ ಬಳಕೆ ವೆಚ್ಚ ತೋರಿಸಿದ್ದು, ಇದು ಅವೈಜ್ಞಾನಿಕ ತೀರ್ಮಾನವಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪಳ: ಕಟ್ಟಡ ಕಾರ್ಮಿಕರ ಮಂಡಳಿಯಿಂದ ಆರೋಗ್ಯ ತಪಾಸಣೆ ಹೆಸರಿನಲ್ಲಿ 33 ಜಿಲ್ಲೆಗಳಿಗೆ ₹330 ಕೋಟಿ ಬಳಕೆ ವೆಚ್ಚ ತೋರಿಸಿದ್ದು, ಇದು ಅವೈಜ್ಞಾನಿಕ ತೀರ್ಮಾನವಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಾನಾ ಕಾರ್ಮಿಕ ಸಂಘಟನೆಗಳು, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅವೈಜ್ಞಾನಿಕ ತೀರ್ಮಾನಗಳ ವಿರುದ್ಧ ಪ್ರತಿಭಟಿಸಿದರು.

ಕಳೆದ ವರ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವಾರು ರೀತಿಯ ಕಿಟ್‌ಗಳು, ಲ್ಯಾಪ್ ಟಾಪ್‌ಗಳು, ಟ್ಯಾಬ್‌ಗಳು, ಶಾಲಾ ಕಿಟ್‌ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇನ್ನೂ ಮುಂತಾದ ರೀತಿಯಲ್ಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ ಹಣ ಮನಸೋಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧ ಮಂಡಳಿಯು ಬಹುಕೋಟಿ ಹಗರಣ ನಡೆಸಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಐಟಿಯುಸಿ ಸಂಘಟನೆ ಈಗಾಗಲೇ ಮನವಿ ಸಲ್ಲಿಸಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯಾಗಲಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಕಾರ್ಮಿಕ ಮಂತ್ರಿಗಳು ಅಗಸ್ಟ್‌ 20, 2023ರಂದು ಸಭೆ ಕರೆದಾಗ ನಮ್ಮ ಸರ್ಕಾರ ಯಾವುದೇ ಕಿಟ್ ಅಥವಾ ಇತರ ವಸ್ತು ರೂಪದಲ್ಲಿ ಈ ಹಿಂದೆ ನೀಡುತ್ತಿದ್ದಯಲ್ಲವನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದರು.ಇದಾದ ನಂತರ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‌ಟಾಪ್‌ ಖರೀದಿಸಿದ್ದಾರೆ. ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರತಿ ಜಿಲ್ಲೆಗೆ 33 ಸಾವಿರ ಕಾರ್ಮಿಕರಿಗೆ ತಲಾ ₹2850ನಂತೆ ಪ್ರತಿ ಜಿಲ್ಲೆಗೆ ₹10 ಕೋಟಿಯಂತೆ 31 ಜಿಲ್ಲೆಗೆ ₹310 ಕೋಟಿಯನ್ನು ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಮಂಡಳಿಯ ಹಣ ತೆಗೆಯಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದರು.

ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎನ್.ವಿ. ಗಫಾರ್, ತುಕಾರಾಮ ಬಿ ಪಾತ್ರೋಟ, ಪ್ರಮುಖರಾದ ಮೌಲಾಸಾಬ್‌ ಕಪಾಲಿ, ಸಾದಿಕ್ ಅಲಿ ದಫೇದಾರ್, ಶಿವಪ್ಪ ದನಕಾರ, ನೂರಸಾಬ್ ಹೊಸಮನಿ, ಜಾಫರ್ ಕುರಿ ಇತರರಿದ್ದರು.