ಸಾರಾಂಶ
ಕುಷ್ಟಗಿ:ಶ್ರೀಕೃಷ್ಣನ ಸಂದೇಶಗಳಲ್ಲಿ ಬದುಕಿನ ಸವಾಲು ಎದುರಿಸಲು ಬೇಕಾಗುವ ಎಲ್ಲ ಅಂಶಗಳು ಒಳಗೊಂಡಿದ್ದು ಅವರ ಸಂದೇಶಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಒಳಿತು, ಕೆಡಕಿನ ಸತ್ಯಗಳು ಮಹಾಭಾರತ, ರಾಮಾಯಣದಲ್ಲಿ ನಮಗೆ ಸಿಗುತ್ತವೆ. ಇವು ಪೌರಾಣಿಕ ಕಾವ್ಯಗಳಾಗಿವೆ. ಈ ಎರಡೂ ಕಾವ್ಯಗಳು ಕನ್ನಡ ಕವಿಗಳಿಗೆ ಹೆಚ್ಚು ಬರವಣಿಗೆ ಅವಕಾಶವಾಯಿತು. ನಮ್ಮ ಮನಸ್ಸು, ಬುದ್ಧಿ, ವಿವೇಕಕ್ಕೆ ಒಳಿತಾದ ಸಂಸ್ಕೃತಿಯ ವಾಹಕಗಳಾಗಿ ಈ ಕಾವ್ಯಗಳಿವೆ. ಭಗವದ್ಗೀತೆ ಎಲ್ಲ ಕಾಲಕ್ಕೂ ಸಲ್ಲುವ, ಧರ್ಮಕ್ಕೆ ಜಯ ಎಂಬ ಸಂದೇಶ ಸಾರಿದ, ಎಲ್ಲರೂ ಪೂಜಿಸುವ, ಅರಿತು ನಡೆಯಲು ಸಹಕಾರಿಯಾದ ಮಹಾಗ್ರಂಥವಾಗಿದೆ ಎಂದರು.ಜಾತಿ-ಮತ ಮೀರಿದ ಕೃಷ್ಣನ ಸಂದೇಶಗಳು ಪ್ರತಿಫಲಾಪೇಕ್ಷೆ ಇಲ್ಲದೆ ಕಾಯಕ ಮಾಡಬೇಕೆಂಬ ಮಾರ್ಗದರ್ಶನ ತಿಳಿಸುತ್ತವೆ. ಸಂದೇಶಗಳು ಶ್ರೀಕೃಷ್ಣ ಒಂದು ವ್ಯಕ್ತಿಯಾಗದೆ ಶಕ್ತಿಯಾಗಿದ್ದಾನೆ. ಸಾಹಿತ್ಯದುದ್ದಕ್ಕೂ ಶ್ರೀಕೃಷ್ಣ ಸಂದೇಶಗಳು ಸಿಗುತ್ತವೆ. ಮಹಾಭಾರತದಲ್ಲಿ ಅತ್ಯಂತ ಗಣನೀಯ ವ್ಯಕ್ತಿತ್ವವಾಗಿ ಶ್ರೀಕೃಷ್ಣ ಕಾಣಿಸಿಕೊಳ್ಳುತ್ತಾನೆ ಎಂದರು.
ಈ ವೇಳೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಯಾದವ ಸಮಾಜದವರು ಇದ್ದರು.ವೃತ್ತಕ್ಕೆ ಪೂಜೆ:ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಹತ್ತಿರ ಇರುವ ಕೃಷ್ಣ ಯಾದವ ವೃತ್ತದಲ್ಲಿರುವ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಕೆ. ಮಹೇಶ, ಬಸವರಾಜ ಹಳ್ಳೂರು, ಉಮೇಶ ಯಾದವ, ಭೀಮನಗೌಡ ಕಟ್ಟಿ, ರಾಮನಗೌಡ ಕಟ್ಟಿ, ದುರಗಪ್ಪ ಬಣಗಾರ, ಶರಣಪ್ಪ ತೆಗ್ಗಿನಮನಿ ಸೇರಿದಂತೆ ಅನೇಕರು ಇದ್ದರು.