ಬಸವಾಪಟ್ಟಣದಲ್ಲಿ ಲಕ್ಷ್ಮೀಕಾಂತ ಬ್ರಹ್ಮರಥೋತ್ಸವ

| Published : Feb 16 2024, 01:46 AM IST

ಸಾರಾಂಶ

ಹಾಸನದ ಬಸವಾಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಲಕ್ಷ್ಮೀಕಾಂತ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇವರಿಗೆ ವಿವಿಧ ರೀತಿಯ ಅರ್ಚನೆ ಸಮರ್ಪಿಸಲಾಗುತ್ತಿದೆ.

ಸರ್ವಧರ್ಮಗಳ ಸಮನ್ವಯ, ಸಾಮರಸ್ಯ, ಸಹಬಾಳ್ವೆ ಉತ್ಸವ-ಟಿ.ವಿ. ಕುಮಾರ

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಗ್ರಾಮದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀಕಾಂತ ಬ್ರಹ್ಮರಥೋತ್ಸವವು ಹಲವು ತಲೆಮಾರುಗಳಿಂದಲೂ ವೈಭವದಿಂದ ನಡೆದು ಬರುತ್ತಿದ್ದು ಶ್ರೀಲಕ್ಷ್ಮೀಕಾಂತೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಭೂದೇವಿಯರ ಜೊತೆಗೆ ಶ್ರೀಲಕ್ಷ್ಮೀಕಾಂತೇಶ್ವರ ವಿಗ್ರಹವು ಬಹಳ ಪುರಾಣ ಪ್ರಸಿದ್ದವಾಗಿದೆ. ಅತಿ ಸುಂದರವಾಗಿ ಕೆತ್ತಿರುವ ದೇವಾಲಯ ಗ್ರಾಮದ ಕೋಟೆ ಬೀದಿಯಲ್ಲಿ ಇದ್ದು ನೂರಾರು ಭಕ್ತರು ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಪೂಜಾದಿ ವಿಶೇಷ ಕೈಂಕರ್ಯಗಳನ್ನು ನೇರವೇರಿಸುತ್ತಿದ್ದಾರೆ.

ಬ್ರಹ್ಮರಥೋತ್ಸವದ ಅಂಗವಾಗಿ ಕಳೆದ ೩ ದಿನಗಳಿಂದ ದೇವಸ್ಥಾನದಲ್ಲಿ ಅಂಕುರಾರ್ಪಣೆ, ಗಜವಾಹನೋತ್ಸವ, ಸೂರ್ಯಮಂಡಲೋತ್ಸವ ಜರುಗಿದ್ದು, ಶುಕ್ರವಾರ ೧೦.೩೦ ಗಂಟೆಯ ನಂತರ ಗರುಡದರ್ಶನ ಪ್ರದಕ್ಷಣೆ ಬಳಿಕ ಬ್ರಹ್ಮರಥದ ಮೇಲೆ ಭೂದೇವಿ, ಶ್ರೀದೇವಿ, ಲಕ್ಷ್ಮೀಕಾಂತ ಸಮೇತ ಬ್ರಹ್ಮರಥೋತ್ಸವವು ಜರುಗಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮದ ಕೆಪಿಎಸ್ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ನಿರ್ವಾಣೆಗೌಡ (ಕುಮಾರ ಟಿ.ವಿ.) ಜಾತ್ರೋತ್ಸವಕ್ಕೆ ಶುಭ ಕೋರಿದ್ದಾರೆ.

ಜಾತ್ರೆಯಲ್ಲಿ ಆಟಿಕೆ ಅಂಗಡಿಗಳು, ಸಿಹಿ ತಿಂಡಿ ಅಂಗಡಿಗಳು ಬರಲಿದ್ದು ಗ್ರಾಮದ ವಿವಿಧ ಸಮಾಜಗಳಿಂದ ಆಗಮಿಸಿದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಯಿರಲಿದೆ. ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಸದ್ಭಕ್ತರು ಅಗಮಿಸಲಿದ್ದು ಸರ್ವರಿಗೂ ಜಾತ್ರಾ ಮಹೋತ್ಸವವದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

ಗ್ರಾಮದ ಈ ಲಕ್ಷ್ಮೀಕಾಂತ ಬ್ರಹ್ಮರಥೋತ್ಸವವು ಸರ್ವಧರ್ಮಗಳ ಸಮನ್ವಯ ಸಾಮರಸ್ಯ ಸಹಬಾಳ್ವೆಗೆ ಹೆಸರಾಗಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು.

ನಿರ್ವಾಣೆಗೌಡ, ಕೆಪಿಎಸ್ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ