ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ಜಿಲ್ಲಾದ್ಯಂತ ರಾಮನಾಮ ಜಪ ಮಾಡಲಾಯಿತು. ಎಲ್ಲೆಡೆ ಕೇಸರಿ ಭಾವುಟ, ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನತೆ ಭಕ್ತಿ ಮೆರೆದರು.ಜಿಲ್ಲಾ ಕೇಂದ್ರ ಚಾಮರಾಜನಗರದ ಹಾಗೂ ತಾಲೂಕು, ಹೋಬಳಿ ಮತ್ತು ಗ್ರಾಮಗಳ ವಿವಿದೆಡೆ ಹೋಮ, ಅನ್ನ ಸಂತರ್ಪಣೆ, ಸಿಹಿ, ಪ್ರಸಾದ ವಿತರಣೆ ಮಾಡಲಾಯಿತು. ನಗರದ ಶಂಕರಪುರ ರಾಮಮಂದಿರ, ಅಗ್ರಹಾರ ಬೀದಿಯ ರಾಮಮಂದಿರ, ಚಿಕ್ಕ ಅಂಗಡಿ ಬೀದಿಯ ರಾಮಮಂದಿರ, ಹಳೆ ಖಾಸಗಿ ಬಸ್ ನಿಲ್ದಾಣದ ಅಚಿಜನೇಯಸ್ವಾಮಿ ದೇವಸ್ಥಾನ, ಕಾಡುನಾರಾಯಣಸ್ವಾಮಿ ದೇವಸ್ಥಾನ, ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಿ, ಹೋಮ ಹವನಗಳನ್ನು ನಡೆಸಲಾಯಿತು. ಬಾಲರಾಮ ಪ್ರತಿಷ್ಠಾಪನೆ ಆಗುತ್ತಿದ್ದಂತೆಯೇ ರಾಮಜಪ, ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು. ತ್ಯಾಗರಾಜ ರಸ್ತೆಯ ಬದಿಯಲ್ಲಿರುವ ಅಂಗಡಿ ಮಾಲೀಕರು ಸೇರಿ ರಾಮ ಜಪ ಮಾಡಿ, ಭಕ್ತಾದಿಗಳಿಗೆ ಲಾಡು ವಿತರಿಸಿದರು. ಶಂಕರಪುರ ರಾಮಮಂದಿರದಲ್ಲಿ ಹೋಮ, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರಿಂದ ಸಹಸ್ರ ನಾಮಾರ್ಚನೆ, ಅಗ್ರಹಾರ ಬೀದಿಯ ರಾಮಮಂದಿರ ಹೋಮ ಮಾಡಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೀವಿನಿ ಟ್ರಸ್ಟ್ ವತಿಯಿಂದ ಮಕ್ಕಳಿಗೆ ರಾಮ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.