ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನಾಲ್ಕಾರು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿರುವುದರಿಂದ ಕಸ ತುಂಬಿಕೊಂಡು ಹೋದ ಲಾರಿಗಳು ರಸ್ತೆ ಗುಂಡಿಯಲ್ಲಿ ಹೂತು ನಿಂತಿವೆ. ಇದರ ಪರಿಣಾಮ ಕಲ್ಲಿನ ಕ್ವಾರಿಗಳಲ್ಲಿ ಕಸ ಸುರಿದು ವಾಪಾಸ್ ಬಾರದಿರುವುದರಿಂದ ನಗರದಲ್ಲಿ ಕಸ ವಿಲೇವಾರಿಯಾಗದೇ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ನಗರದ ವಿವಿಧ ಭಾಗಗಳಲ್ಲಿ ವಿಲೇಯಾಗದೆ ಉಳಿದ ಸಾವಿರಾರು ಟನ್ ಕಸದ ರಾಶಿ ಮಳೆ ನೀರಿನಿಂದಾಗಿ ಕೊಳೆತು ನಾರುವಂತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಎಲ್ಲೆಂದರಲ್ಲಿ ಹಾಗೆ ಬಿದ್ದಿರುವ ಕಸದ ರಾಶಿ ಕೊಳೆತು ಹೋಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ.
ಕೋಗಿಲು ಕ್ರಾಸ್‌ನಲ್ಲಿರುವ ಬೆಳ್ಳಳ್ಳಿ ಡಂಪಿಂಗ್ ಯಾರ್ಡ್‌ಗೆ ತೆರಳುವ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿರುವುದರಿಂದ ಅಲ್ಲಿಗೆ ತೆರಳಿರುವ ಲಾರಿಗಳು ರಸ್ತೆಯಲ್ಲೇ ಹೂತು ಹೋಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ಅಲ್ಲೇ ಸಾಲುಗಟ್ಟಿ ನಿಲ್ಲುವಂತಾಗಿದೆ. ಹೀಗಾಗಿ ಕಸದ ಲಾರಿಗಳು ಸುಮಾರು 3 ಕಿ.ಮೀ ಸಾಲುಗಟ್ಟಿ ನಿಂತಿರುವ ದೃಶ್ಯ ಡಂಪಿಂಗ್ ಯಾರ್ಡ್ ಬಳಿ ಕಂಡು ಬರುತ್ತಿದೆ.ಕಸ ವಿಲೇವಾರಿಗೆ ಇರುವುದು ಒಂದೇ ಡಂಪಿಂಗ್ ಯಾರ್ಡ್ ಇರುವುದರಿಂದ ಲಾರಿಗಳಲ್ಲಿ ತುಂಬಿರುವ ಕಸ ವಿಲೇವಾರಿ ಮಾಡಿ ವಾಪಸ್ ಆಗಲು ಮೂರ್ನಾಲ್ಕು ದಿನಗಳು ಬೇಕು. ಇದರಿಂದ ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ರಸ್ತೆ ಬದಿ ಬಿದ್ದಿರುವ ಕಸ ದುರ್ನಾತ ಬೀರುತ್ತಿದೆ. ಇನ್ನು ಮನೆಗಳ ಬಳಿ ಸಂಗ್ರಹ ಮಾಡಲಾಗಿರುವ ಕಸದಿಂದ ಸೊಳ್ಳೆಗಳು ಹೆಚ್ಚಾಗುವ ಆತಂಕವೂ ಮನೆ ಮಾಡಿದೆ.
ಸದ್ಯ ನಗರದಲ್ಲಿ ಸುಮಾರು 12 ಸಾವಿರ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಸ ಉಳಿದಿದ್ದು, ಅದನ್ನು ತೆರವು ಮಾಡಲು ಕನಿಷ್ಠ ಒಂದು ವಾರ ಸಮಯ ಬೇಕು ಎನ್ನುತ್ತಿದ್ದಾರೆ ಕಸ ವಿಲೇವಾರಿ ಗುತ್ತಿಗೆದಾರರು.ಮನೆಗಳಿಂದ ಕಸ ಸಂಗ್ರಹ ಸ್ಥಗಿತನಗರದಲ್ಲಿ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹ ಮಾಡುವ ಆಟೋ ಟಿಪ್ಪರ್‌ಗಳು ಕೂಡಾ ನಾಲ್ಕು ದಿನಗಳಿಂದ ನಾಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದರೆ ಕಸ ಸಂಗ್ರಹಿಸಿಕೊಂಡು ಹೋಗಿರುವುದು ಇನ್ನು ವಿಲೇವಾರಿಯಾಗಿಲ್ಲ. ಲಾರಿಗಳು ಬಂದಲ್ಲಿ ಅದಕ್ಕೆ ಭರ್ತಿ ಮಾಡಿದ ನಂತರವೇ ಮನೆ ಬಳಿಗೆ ಬಂದು ಕಸ ಸಂಗ್ರಹ ಮಾಡುವುದಾಗಿ ಕಸ ಸಂಗ್ರಹಿಸುವ ಆಟೋ ಚಾಲಕರು ಹಾಗೂ ಗುತ್ತಿಗೆದಾರರು ಹೇಳುತ್ತಿದ್ದಾರೆ.