ಸಾರಾಂಶ
ಆಸ್ಪತ್ರೆಗೆ ದಾಖಲಾಗುವ ಮೊದಲೇ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳ ಚಿಕಿತ್ಸೆಗೆ ವೈದ್ಯರ ವಿಶೇಷ ತಂಡ ರಚಿಸಲಾಗಿದೆ. ಗಾಯಾಳುಗಳಿಗೆಲ್ಲ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ವಿವಿಧ ಪರೀಕ್ಷೆ ನಡೆಯುತ್ತಿವೆ.
ಹುಬ್ಬಳ್ಳಿ:
ಯಲ್ಲಾಪುರದ ಗುಳ್ಳಾಪುರ ಬಳಿ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಗಾಯಗೊಂಡಿದ್ದ 10 ಮಂದಿಯನ್ನು ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಗಾಯಗೊಂಡ 11 ಮಂದಿಯನ್ನು ಬೆಳಿಗ್ಗೆ 6.30ಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕೆಎಂಸಿಆರ್‌ಐಗೆ ಕರೆತರಲಾಗಿತ್ತು. ಇವರಲ್ಲಿ ಸವಣೂರಿನ ಜಲಾಲ್ ಬಾಷಾ ಮಂಚಗಿ (27) ಆಸ್ಪತ್ರೆಗೆ ದಾಖಲಾಗುವ ಪೂರ್ವವೇ ಮೃತಪಟ್ಟಿದ್ದಾರೆ. ಉಳಿದವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಗಾಯಾಳುಗಳಾದ ಮಲ್ಲಿಕ್ ರಿಹಾನ್ ಅಕ್ಕಿ (22), ಅಪ್ಸರ್‌ಖಾನ್ (20), ಅಶ್ರಫ್ (20), ನಿಜಾಮುದ್ದೀನ್ ಸೌದಗಾರ್ (28), ಖಾಜಾಹುಸೇನ್ ಕಿಸ್ಮತಘರ (30), ಖಾಜಾಮೈನು ಕಲ್ಲಿನೂರ (21), ಮಹ್ಮದ್ ಸಾಧಿಕ್ ಭಠೇರಿ (21), ಮರ್ದಾನಸಾಬ್ ಕಾರಡಗಿ(21), ಇರ್ಫಾನ್ ಗುಡಿಗೇರಿ (18), ಜಾಫರ್ ಸವಣೂರ (28) ಸವಣೂರು ಪಟ್ಟಣದ ತರಕಾರಿ ವ್ಯಾಪಾರಸ್ಥರು. ಲಾರಿಯಲ್ಲಿ ತರಕಾರಿ, ಹಣ್ಣು ತುಂಬಿಕೊಂಡು ಸವಣೂರಿನಿಂದ ರಾತ್ರಿ 12 ಗಂಟೆಗೆ ಕುಮಟಾಕ್ಕೆ ತೆರಳಿದ್ದರು. ಕುಮಟಾದಲ್ಲಿ ನಡೆಯುವ ಬುಧವಾರ ಸಂತೆಗೆ ತೆರಳುತ್ತಿದ್ದರು.ಸಮರ್ಪಕ ಚಿಕಿತ್ಸೆಗಾಗಿ ಆಕ್ರೋಶ:
ಬೆಳಗ್ಗೆ 6.30ಕ್ಕೆ ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಕೆಎಂಸಿಆರ್‌ಐಗೆ ಕರೆದುಕೊಂಡು ಬಂದರೆ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಇರಲಿಲ್ಲ. ಗಂಭೀರವಾಗಿ ಗಾಯಗೊಂಡಿರುವವರಿಗೆ ತುರ್ತು ಚಿಕಿತ್ಸೆ ಕೊಡುವುದನ್ನು ಬಿಟ್ಟು ಚೀಟಿ ಮಾಡಿಸಿಕೊಂಡು ಬನ್ನಿ, ಆಧಾರ್ ಕಾರ್ಡ್ ತೋರಿಸಿ ಆ ಮೇಲೆಯೇ ಚಿಕಿತ್ಸೆ ನೀಡುತ್ತೇವೆ ಎಂದು ಸಿಬ್ಬಂದಿ ಹೇಳಿದಾಗ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಕೆಲವರು ವಾಗ್ವಾದ ನಡೆಸಿದರು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಜುಬೇರ್ ಎಚ್ಚರಿಕೆ ನೀಡಿದರು. ಘಟನೆಯ ಮಾಹಿತಿ ಅರಿತು ಆಸ್ಪತ್ರೆಗೆ ಭೇಟಿ ನೀಡಿದ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಸೂಚಿಸಿದರು.ಆಸ್ಪತ್ರೆಗೆ ದಾಖಲಾಗುವ ಮೊದಲೇ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳ ಚಿಕಿತ್ಸೆಗೆ ವೈದ್ಯರ ವಿಶೇಷ ತಂಡ ರಚಿಸಲಾಗಿದೆ. ಗಾಯಾಳುಗಳಿಗೆಲ್ಲ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ವಿವಿಧ ಪರೀಕ್ಷೆ ನಡೆಯುತ್ತಿವೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.