ಲಾರಿ ಚಾಲಕನ ಪುತ್ರಿ ರಾಜ್ಯಕ್ಕೆ ಟಾಪರ್!

| Published : Apr 09 2025, 12:30 AM IST

ಸಾರಾಂಶ

ಕಲಾ ವಿಭಾಗದಲ್ಲಿ (600ಕ್ಕೆ 597 ಅಂಕ) ರಾಜ್ಯಕ್ಕೆ ಟಾಪರ್‌ ಆದ ಲಾರಿ ಚಾಲಕನ ಪುತ್ರಿ ಎಲ್‌.ಆರ್‌. ಸಂಜನಾಬಾಯಿ ಆತ್ಮವಿಶ್ವಾಸದ ನುಡಿಗಳಿವು.

ಐಎಎಸ್‌ ಮಾಡುವ ಕನಸು ಹೊತ್ತ ತಾಂಡಾ ಹುಡ್ಗಿ ಸಂಜನಾ । ಕಿತ್ತು ತಿನ್ನುವ ಬಡತನದಲ್ಲೂ ಹುಬ್ಬೇರಿಸುವ ಸಾಧನೆಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

"ಮುಂದೆ ಐಎಎಸ್‌ ಮಾಡಬೇಕೆಂಬ ಅಚಲ ಗುರಿಯೊಂದಿಗೆ ಓದಿದ್ದಕ್ಕೆ ಉತ್ತಮ ಫಲಿತಾಂಶ ಬಂದಿದೆ. ನನಗೆ ಪ್ರೋತ್ಸಾಹ ದೊರೆತರೆ, ಖಂಡಿತ ಐಎಎಸ್‌ ಅಧಿಕಾರಿಯಾಗುವೆ "

ಕಲಾ ವಿಭಾಗದಲ್ಲಿ (600ಕ್ಕೆ 597 ಅಂಕ) ರಾಜ್ಯಕ್ಕೆ ಟಾಪರ್‌ ಆದ ಲಾರಿ ಚಾಲಕನ ಪುತ್ರಿ ಎಲ್‌.ಆರ್‌. ಸಂಜನಾಬಾಯಿ ಆತ್ಮವಿಶ್ವಾಸದ ನುಡಿಗಳಿವು.

ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಪಂ ವ್ಯಾಪ್ತಿಯ ಗುಂಡಾ ಸ್ಟೇಶನ್‌ ವಾಸಿ ಎಲ್‌.ಕೆ. ರಾಮ ನಾಯ್ಕ ಮತ್ತು ಎಲ್. ಕಾವೇರಿಬಾಯಿ ದಂಪತಿ ಪುತ್ರಿ ಈ ಸಂಜನಾಬಾಯಿ. ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ಓದಿದ ಸಂಜನಾಬಾಯಿ ಇಡೀ ರಾಜ್ಯ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಮೆಚ್ಚಿ ಗಣ್ಯರು ಮತ್ತು ಬಿಗ್‌ ಬಾಸ್‌ ಖ್ಯಾತಿಯ ಗಾಯಕ ಹನುಮಂತ ಲಮಾಣಿ ಹಾಗೂ ಸರಿಗಮಪ ಖ್ಯಾತಿಯ ರಮೇಶ ಲಮಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.

ಕಿತ್ತು ತಿನ್ನುವ ಬಡತನ:

ರಾಮಾ ನಾಯ್ಕ ಲಾರಿ ಚಾಲಕರಾಗಿದ್ದು, ಕಿತ್ತು ತಿನ್ನುವ ಬಡತನದಲ್ಲೆ ಮಗಳನ್ನು ಹಾಸ್ಟೆಲ್‌ನಲ್ಲಿಟ್ಟು ಓದಿಸಿದ್ದಾರೆ. ರಾಮಾ ನಾಯ್ಕ ಹಾಗೂ ಕಾವೇರಿಬಾಯಿ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನಿದ್ದು, ಈ ಕುಟುಂಬಕ್ಕೆ ಜನತಾ ಮನೆಯೇ ಆಸರೆಯಾಗಿದೆ. ಸ್ವಂತ ಜಮೀನು ಇಲ್ಲದೇ ರಟ್ಟೆ ಬಲದ ಮೇಲೆಯೇ ಮಗಳನ್ನು ಪಿಯುಸಿ ಓದಿಸಿದ್ದಾರೆ. ತಂದೆಯ ಬಡತನ ಓದಿಗೆ ಅಡ್ಡಿಯಾಗದಂತೇ ಕಠಿಣ ಪರಿಶ್ರಮದಿಂದ ಓದಿರುವ ಸಂಜನಾಯಿ, ಈಗ ಇಡೀ ರಾಜ್ಯಕ್ಕೆ ಟಾಪರ್‌ ಆಗಿದ್ದು, ರಾಮನಾಯ್ಕರ ಖುಷಿಗೆ ಪಾರವೇ ಇಲ್ಲದಂತಾಗಿದೆ.

600ಕ್ಕೆ 597 ಅಂಕಗಳು:

ಸಂಜನಾಬಾಯಿ ರಾಜ್ಯಶಾಸ್ತ್ರ-100, ಶಿಕ್ಷಣ ಶಾಸ್ತ್ರ-100, ಸಂಸ್ಕೃತ- 100, ಕನ್ನಡ100, ಐಚ್ಛಿಕ ಕನ್ನಡ 100ಕ್ಕೆ 99 ಮತ್ತು ಇತಿಹಾಸದಲ್ಲಿ 100ಕ್ಕೆ 98 ಅಂಕ ಗಳಿಸಿದ್ದಾಳೆ.

ನಾನು ಐಎಎಸ್‌ ಮಾಡುವ ಇರಾದೆ ಹೊಂದಿರುವೆ. ಕಾಲೇಜು ಮತ್ತು ವಸತಿ ನಿಲಯದಲ್ಲಿ ಸಂಜೆ 5.30ರಿಂದ ರಾತ್ರಿ 11ರವರೆಗೆ ಓದುತ್ತಿದ್ದೆ. ಮತ್ತೆ ಬೆಳಗ್ಗೆ 4.30ರಿಂದ 7ರವರೆಗೆ ಓದುತ್ತಿದ್ದೆ. ಓದೇ ನನ್ನ ಹವ್ಯಾಸ ಆಗಿದೆ. ಮುಂದೆ ಪದವಿ ಮಾಡಿ, ಐಎಎಸ್‌ ಮಾಡುವ ಗುರಿ ಹೊಂದಿರುವೆ ಎನ್ನುತ್ತಾರೆ ಸಂಜನಾಬಾಯಿ.

ಎಷ್ಟೇ ಕಷ್ಟ ಆಗಲಿ. ನಾನು ನನ್ನ ಮಗಳಿಗೆ ಐಎಎಸ್‌ ಮಾಡಿಸಿ, ಜಿಲ್ಲಾಧಿಕಾರಿ ಮಾಡಿಸುವೆ. ಮಗಳ ಕನಸು ಈಡೇರಿಸುವುದೇ ನನ್ನ ಕರ್ತವ್ಯ ಎನ್ನುತ್ತಾರೆ ಸಂಜನಾಬಾಯಿಯ ತಂದೆ ರಾಮಾನಾಯ್ಕ.

ಗುಂಡಾ ಸ್ಟೇಶನ್‌ ವಾಸಿಗಳಲ್ಲಿ ಅಭಿಮಾನ ತಂದ ಸಂಜನಾಬಾಯಿ!:

ಗುಂಡಾ ಸ್ಟೇಶನ್‌ ಗ್ರಾಮ ಬಡವರೇ ನೆಲೆಸಿದ ಪ್ರದೇಶವಾಗಿದೆ. ಅವಮಾನವನ್ನೇ ಹೊತ್ತು ಜೀವಿಸಿದ ಈ ಪುಟ್ಟ ಗ್ರಾಮದತ್ತ ಇಡೀ ರಾಜ್ಯವೇ ತಿರುಗಿ ನೋಡುವಂತೇ ಬಾಲಕಿ ಎಲ್‌.ಆರ್‌. ಸಂಜನಾಬಾಯಿ ಮಾಡಿದ್ದಾರೆ. ಈ ಮೂಲಕ ಇಡೀ ಗ್ರಾಮವೇ ಅಭಿಮಾನದಿಂದ ಬೀಗುತ್ತಿದೆ.

ಡಣಾಪುರ ಗ್ರಾಪಂ ವ್ಯಾಪ್ತಿಗೆ ಬರುವ ಪುಟ್ಟ ಹಳ್ಳಿ, ಅತ್ತ ತಾಂಡಾ ಕೂಡ ಅಲ್ಲ, ಇತ್ತ ಕಾಲನಿಯೂ ಅಲ್ಲ. ಕಾರ್ಖಾನೆಯೊಂದರ ದೂಳಿನಲ್ಲೇ ಆವರಿಸಿರುವ ಈ ಪುಟ್ಟ ಹಳ್ಳಿಯಲ್ಲಿ ದೂಳಿನ ಕಾರ್ಮೋಡ ಸರಿಸಿ; ಬಾಲಕಿ ಸಂಜನಾಬಾಯಿ ಸಾಧನೆ ಮಾಡಿದ್ದಾರೆ. ಈ ಗುಂಡಾ ಸ್ಟೇಶನ್‌ ಅನ್ನು ಈ ಹಿಂದೆ ಡಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಗುರುತಿಸಿಕೊಳ್ಳಲು ಇಲ್ಲಿನ ಜನ ಪರದಾಡಿದ್ದಾರೆ. ವಿಜಯನಗರ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಗ್ರಾಮದ ಸಮಸ್ಯೆಯತ್ತ ಕಣ್ಣು ಹಾಯಿಸಬೇಕು. ಬಾಲಕಿ ಸಂಜನಾಬಾಯಿ ಈ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಬಂದಿದ್ದಾರೆ ಎಂದು ನಮಗೆ ಭಾಸವಾಗುತ್ತಿದೆ. ಯಾವತ್ತೂ ಬಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ನಮ್ಮ ಪುಟ್ಟ ಹಳ್ಳಿಯತ್ತ ಬರುವಂತಾಗಿದೆ ಎಂದು ಹೇಳುತ್ತಾರೆ ಈ ಕುಗ್ರಾಮದ ಯುವಕ ಅಲೋಕ್ ನಾಯ್ಕ.