ಸಾರಾಂಶ
ಕೂಡಲೇ ಡೀಸೆಲ್ ದರ ಇಳಕೆ ಮಾಡಬೇಕು.
ಕಾರವಾರ: ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಏರಿಕೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಲಾರಿ ಮಾಲೀಕರ ಸಂಘದಿಂದ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಲಾರಿ ಮಾಲಕರ ಸಂಘದವರು ಪ್ರತಿಭಟನೆ ನಡೆಸಿದರು.ಕೂಡಲೇ ಡೀಸೆಲ್ ದರ ಇಳಕೆ ಮಾಡಬೇಕು. ಜೊತೆಗೆ ಹೆದ್ದಾರಿಗಳು ಅರೆಬರೆಯಾಗಿದ್ದರೂ ಟೋಲ್ ದರ ಏರಿಕೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸುವವರೆಗೆ ಟೋಲ್ ಸ್ಥಗೀತಗೊಳಿಸಬೇಕು ಎಂದು ಆಗ್ರಹಿಸಿದರು.
ಲಾರಿ ಮಾಲಕರ ಸಂಘದ ಅಧ್ಯಕ್ಷ ಮಾಧವ ನಾಯಕ, ರಾಜ್ಯ ಸಂಘದಿಂದ ಕರೆ ನೀಡಿರುವ ಈ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ಸಂಪೂರ್ಣ ಬೆಂಬಲ ನೀಡಿದ್ದೇವೆ. ಲಾರಿ ಮಾಲಕರ ಜೊತೆಗೆ ಟೆಂಪೋ ಮಾಲಕರ ಸಂಘವೂ ಮುಷ್ಕರಕ್ಕೆ ಬೆಂಬಲ ಸೂಚಿಸಿದೆ. ಡೀಸೆಲ್ ದರ ಏರಿಕೆ ಮಾಡುವುದರಿಂದ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಹಲವು ವರ್ಷಗಳಿಂದ ಹೆದ್ದಾರಿಯೇ ಸಮರ್ಪಕವಾಗಿಲ್ಲ. ಆದರೂ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ದರವನ್ನೂ ಹೆಚ್ಚಿಸಲಾಗಿದೆ. ಕೂಡಲೇ ಟೋಲ್ ಶುಲ್ಕ ವಸೂಲಿ ನಿಲ್ಲಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ ಟೆಂಪೋ ಹಾಗೂ ಆಟೋಗಳನ್ನು ಹತ್ತುವವರಿಲ್ಲದಂತಾಗಿದೆ. ಜನ ಪ್ರೀ ಬಸ್‌ಗಳ ಮೂಲಕ ಓಡಾಡುವ ಕಾರಣ ಟೆಂಪೋಗಳು ಖಾಲಿ ಓಡಾಡುತ್ತಿವೆ. ಇದೀಗ ಡೀಸೆಲ್ ದರ ಏರಿಕೆ ಮಾಡಿ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಕೂಡಲೇ ಸರ್ಕಾರ ಡೀಸೆಲ್ ದರವನ್ನು ಇಳಕೆ ಮಾಡಬೇಕು ಎಂದು ಆಗ್ರಹಿಸಿದರು.