ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಜೂನ್ ತಿಂಗಳಿನಲ್ಲಿಯೇ ಪ್ರಾರಂಭವಾಗುತ್ತಿವೆ. ಪ್ರತಿ ವರ್ಷ ಕಾರ್ಖಾನೆ ಪ್ರಾರಂಭಕ್ಕೆ ಮುನ್ನವೇ ದರ ನಿಗದಿಪಡಿಸಬೇಕಿದೆ. ಸಾಗಾಣಿಕೆ ವೆಚ್ಚ ಮತ್ತು ಕಟಾವು ದರವನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರೂ ಇದುವರೆಗೂ ದರ ಹೆಚ್ಚಳ ಮಾಡಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ದಕ್ಷಿಣ ಕರ್ನಾಟಕ ರಾಜ್ಯಗಳ ವ್ಯಾಪ್ತಿಯಲ್ಲಿ ಸರ್ಕಾರಗಳು ನಿಗದಿ ಪಡಿಸಿರುವ ಕಬ್ಬು ಸಾಗಾಣಿಕೆ ದರ ನೀಡುವಂತೆ ಆಗ್ರಹಿಸಿ ಚಾಂಷುಗರ್ ಕಾರ್ಖಾನೆ ವ್ಯಾಪ್ತಿಯ ಶ್ರೀ ಚಾಮುಂಡೇಶ್ವರಿ ಲಾರಿ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.ಕಾರ್ಖಾನೆ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ದಿನೇ ದಿನೇ ಡೀಸಲ್ ಸೇರಿದಂತೆ ಲಾರಿ, ಟ್ರ್ಯಾಕ್ಟರ್ ಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸಾಗಾಣಿಕೆ ಮಾಡುವ ಲಾರಿ, ಟ್ರ್ಯಾಕ್ಟರ್ ಗಳಿಗೆ ಈ ಹಿಂದಿನ ದರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.2022ರ ಜುಲೈನಲ್ಲಿ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ದರ ಪರಿಷ್ಕರಣೆಗಾಗಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ ಮಾರ್ಗಸೂಚಿ ಹೊರಡಿಸಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ್ದರೂ ಆಡಳಿತ ಮಂಡಳಿಗಳು ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು.
ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಜೂನ್ ತಿಂಗಳಿನಲ್ಲಿಯೇ ಪ್ರಾರಂಭವಾಗುತ್ತಿವೆ. ಪ್ರತಿ ವರ್ಷ ಕಾರ್ಖಾನೆ ಪ್ರಾರಂಭಕ್ಕೆ ಮುನ್ನವೇ ದರ ನಿಗದಿಪಡಿಸಬೇಕಿದೆ. ಸಾಗಾಣಿಕೆ ವೆಚ್ಚ ಮತ್ತು ಕಟಾವು ದರವನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರೂ ಇದುವರೆಗೂ ದರ ಹೆಚ್ಚಳ ಮಾಡದಿರುವುದನ್ನು ಖಂಡಿಸಿದರು.ಲಾರಿ ಮತ್ತು ಟ್ರ್ಯಾಕ್ಟರ್ ಗಳಿಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ. ಈಗ ಕಾರ್ಖಾನೆಗಳು ನೀಡುತ್ತಿರುವ ಸಾಗಾಣಿಕೆ ವೆಚ್ಚ ಯಾವುದಕ್ಕೂ ಸಾಲದು. ಡೀಸೆಲ್ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಕೂಡಲೇ 2021-22ನೇ ಸಾಲಿನಲ್ಲಿ ಹೊರಡಿಸಿರುವ ಕಬ್ಬು ಕಟಾವು, ಸಾಗಾಣಿಕೆ ವೆಚ್ಚದ ಮಾರ್ಗಸೂಚಿಗಳನ್ನು ಚಾಂಶುಗರ್ ಸಕ್ಕರೆ ಕಾರ್ಖಾನೆ ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಲಾರಿ ಮತ್ತು ಟ್ರ್ಕಾಕ್ಟರ್ ಮಾಲೀಕರ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಾಂಷುಗರ್ ಕಾರ್ಖಾನೆ ವ್ಯಾಪ್ತಿಯ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಅಕ್ಕೂರು ನಿಂಗೇಗೌಡ, ಉಪಾಧ್ಯಕ್ಷ ಅಣ್ಣೂರು ಶಿವಕುಮಾರ್, ಕಾರ್ಯದರ್ಶಿ ಕೆಂಪಯ್ಯ, ಸಹ ಕಾರ್ಯದರ್ಶಿ ಶಿವಣ್ಣ, ನಿರ್ದೇಶಕರಾದ ಶರತ್, ಸಂದೀಪ್, ಶಿವರಾಮು, ಮಹೇಶ್, ಆನಂದ್, ಶಿವರಾಮು. ರಮೇಶ್ ಸೇರಿದಂತೆ ಮತ್ತಿತರರು ಇದ್ದರು.