ಬೇಡಿಕೆಗಳಿಗೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ 2ನೇ ದಿನವೂ ಮುಂದುವರಿದ ಲಾರಿ ಮುಷ್ಕರ : ಅಗತ್ಯ ವಸ್ತು ಪೂರೈಕೆ ವ್ಯತ್ಯಯ

| N/A | Published : Apr 17 2025, 12:03 AM IST / Updated: Apr 17 2025, 09:27 AM IST

ಬೇಡಿಕೆಗಳಿಗೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ 2ನೇ ದಿನವೂ ಮುಂದುವರಿದ ಲಾರಿ ಮುಷ್ಕರ : ಅಗತ್ಯ ವಸ್ತು ಪೂರೈಕೆ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಡೀಸೆಲ್‌ ದರ ಇಳಿಕೆ ಸೇರಿ ಇನ್ನಿತರ ಬೇಡಿಕೆಗಳಿಗೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಸರಕು ಸಾಗಣೆ ಲಾರಿ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು, ಬುಧವಾರದಿಂದ ಅಗತ್ಯ ವಸ್ತುಗಳ ಕೊರತೆ ಹೆಚ್ಚಾಗಿದೆ.

 ಬೆಂಗಳೂರು : ಡೀಸೆಲ್‌ ದರ ಇಳಿಕೆ ಸೇರಿ ಇನ್ನಿತರ ಬೇಡಿಕೆಗಳಿಗೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಸರಕು ಸಾಗಣೆ ಲಾರಿ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು, ಬುಧವಾರದಿಂದ ಅಗತ್ಯ ವಸ್ತುಗಳ ಕೊರತೆ ಹೆಚ್ಚಾಗಿದೆ. ಸರಕು ಸಾಗಣೆ ಲಾರಿ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿರುವುದರಿಂದಾಗಿ ಆರು ಲಕ್ಷ ಲಾರಿ, ಗೂಡ್ಸ್‌ ವಾಹನಗಳು ಸ್ಥಗಿತಗೊಂಡಿವೆ. 

ಇದರ ಪರಿಣಾಮ ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಬರುತ್ತಿದ್ದ ದಿನಸಿ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಬುಧವಾರದಿಂದ ವ್ಯತ್ಯಯ ಆರಂಭವಾಗಿದೆ. ಅದರಲ್ಲೂ ಎಪಿಎಂಸಿಗೆ ಬರುತ್ತಿದ್ದ ಲಾರಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದು, ಈರುಳ್ಳಿ ಸೇರಿ ಇನ್ನಿತರ ವಸ್ತುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.

ಈರುಳ್ಳಿ ಬೆಲೆ 1ರು. ಹೆಚ್ಚಳ:

ಬೆಂಗಳೂರಿನ ವಿವಿಧ ಎಪಿಎಂಸಿಗಳಿಗೆ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಸೇರಿ ಇನ್ನಿತರ ಅಗತ್ಯ ವಸ್ತುಗಳು ಸರಬರಾಜಾಗುತ್ತವೆ. ಈರುಳ್ಳಿ ಬೆಲೆ 1 ರು. ಹೆಚ್ಚಳವಾಗಿದೆ. ಲಾರಿ ಮುಷ್ಕರ ಮುಂದುವರಿದು ಅಗತ್ಯ ವಸ್ತುಗಳು ಬರುವ ಪ್ರಮಾಣ ಕಡಿಮೆಯಾದರೆ, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಸರಕು ಸಾಗಣೆ ಲಾರಿ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ಸಂಘ, ಗುರುವಾರ ಸಭೆ ಕರೆದಿದೆ. ಸರಕು ಸಾಗಣೆ ಲಾರಿಗಳ ಜತೆಗೆ ಎಲ್ಲ ರೀತಿಯ ಲಾರಿಗಳನ್ನೂ ಸಂಪೂರ್ಣ ಲಾರಿ ಬಂದ್‌ ನಡೆಸುವ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಅದರಲ್ಲೂ, ಚಿತ್ರದುರ್ಗ, ವಿಜಯಪುರ ಸೇರಿ ಇನ್ನಿತರ ಜಿಲ್ಲೆಗಳಿಂದ ಸರಾಸರಿ 400ಕ್ಕೂ ಹೆಚ್ಚಿನ ಲಾರಿಗಳು ಈರುಳ್ಳಿಯನ್ನು ಯಶವಂತಪುರ ಸೇರಿ ಬೆಂಗಳೂರಿನ ಇತರ ಎಪಿಎಂಸಿಗಳಿಗೆ ತರುತ್ತಿದ್ದವು. ಆದರೆ, ಬುಧವಾರ ಆ ಸಂಖ್ಯೆ 200ಕ್ಕಿಂತ ಕಡಿಮೆಯಾಗಿದೆ. ಯಶವಂತಪುರ ಎಪಿಎಂಸಿಗೆ ಏ.15ರಂದು 56,798 ಚೀಲ ಈರುಳ್ಳಿ ಬಂದಿತ್ತು. ಏ. 16ರಂದು 38,669 ಚೀಲಕ್ಕಿಳಿದಿದೆ. ಇದರ ಪರಿಣಾಮ ಎಪಿಎಂಸಿಗಳಲ್ಲೇ ಸಗಟು ಮಾರಾಟದಲ್ಲಿ

ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಅಧ್ಯಕ್ಷ ಜಿ.ಆರ್‌. ಷಣ್ಮುಗಪ್ಪ, ಸರ್ಕಾರ ನಮ್ಮ ಬೇಡಿಕೆಯನ್ನು ಒಪ್ಪದ ಹಿನ್ನೆಲೆಯಲ್ಲಿ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ. ಅದಕ್ಕಾಗಿ ಗುರುವಾರ ಸಭೆ ನಡೆಸಲಾಗುತ್ತಿದ್ದು, ಸಂಪೂರ್ಣ ಲಾರಿ ಬಂದ್‌ ಸೇರಿದಂತೆ ಇನ್ನಿತರ ರೀತಿಯಲ್ಲಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಲಾರಿ ಮುಷ್ಕರದ ಜತೆಗೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಬಂದ್‌ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜತೆಗೆ ಹೊರರಾಜ್ಯಗಳಿಂದ ಬರುವ ತರಕಾರಿ, ಸೊಪ್ಪು ಸೇರಿ ನಿತ್ಯ ಬಳಕೆ ಪದಾರ್ಥಗಳನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಎಪಿಎಂಸಿ ಸೇವೆಯನ್ನೂ ನಿಲ್ಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳಿಗೆ ಸರ್ಕಾರವೇ ಹೊಣೆ ಎಂದರು.