ದಾನ, ಧರ್ಮ, ಪರೋಪಕಾರ ಮಾಡಿ ಪಾಪ ಕಳೆದುಕೊಳ್ಳಿ: ರುದ್ರಮುನಿ ಶಿವಾಚಾರ್ಯರು

| Published : Sep 23 2025, 01:06 AM IST

ಸಾರಾಂಶ

ಮಹಾತ್ಮರು, ಶರಣರು, ಸಂತರು, ಶಿವಯೋಗಿಗಳು ಯಾವ ಕ್ಷೇತ್ರದಲ್ಲಿ ಪಾದಸ್ಪರ್ಶ ಮಾಡುತ್ತಾರೋ ಅದು ಪುಣ್ಯಕ್ಷೇತ್ರವಾಗುತ್ತದೆ. ನಾಗರಾಳ ಗ್ರಾಮದಂತಹ ಪುಣ್ಯಕ್ಷೇತ್ರದಲ್ಲಿ ಬಂದು ಪಾಪ ಕಳೆದುಕೊಳ್ಳಬೇಕು ಎಂದು ಗಿರಿಸಾಗರ ಕಲ್ಯಾಣಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮಹಾತ್ಮರು, ಶರಣರು, ಸಂತರು, ಶಿವಯೋಗಿಗಳು ಯಾವ ಕ್ಷೇತ್ರದಲ್ಲಿ ಪಾದಸ್ಪರ್ಶ ಮಾಡುತ್ತಾರೋ ಅದು ಪುಣ್ಯಕ್ಷೇತ್ರವಾಗುತ್ತದೆ. ನಾಗರಾಳ ಗ್ರಾಮದಂತಹ ಪುಣ್ಯಕ್ಷೇತ್ರದಲ್ಲಿ ಬಂದು ಪಾಪ ಕಳೆದುಕೊಳ್ಳಬೇಕು ಎಂದು ಗಿರಿಸಾಗರ ಕಲ್ಯಾಣಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ನಾಗರಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕಪ್ಪರ ಪಡಿಯಮ್ಮ ಸಭಾಮಂದಿರ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಂದು ಜನರು ಕ್ಷಣ ಕ್ಷಣಕ್ಕೂ ತಪ್ಪು ಮತ್ತು ಪಾಪ ಮಾಡುತ್ತಿದ್ದೇವೆ. ಅರಿತೋ ಅರಿಯದೆಯೋ ಮಾಡಿದ ತಪ್ಪನ್ನು, ಪಾಪವನ್ನು ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಬಂದು ಪುಣ್ಯ ಕಾರ್ಯ ಮಾಡಿ ಕಳೆದುಕೊಳ್ಳಬೇಕು. ಒಳ್ಳೆತನದ ದಾನ, ಧರ್ಮ, ಪರೋಪಕಾರ ಮಾಡಬೇಕು. ನಾಗರಾಳ ದಿಗಂಬರೇಶ್ವರ ಮಠ ತನ್ನದೆಯಾದ ದೈವಿಕ ಶಕ್ತಿ ಹೊಂದಿದೆ. ದಿಗಂಬರೇಶ್ವರರು ಸಿದ್ಧ ಸಾಧಕರು. ಆದಿ ಶಕ್ತಿ ಸ್ವರೂಪಿಯಾದ ಕಪ್ಪರ ಪಡಿಯಮ್ಮನನ್ನು ಒಲಿಸಿಕೊಂಡಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಕ್ತರಿಗೆ ಅಸಾಧ್ಯವಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಭಕ್ತಿ-ಶಕ್ತಿ ಸೇರಿ ಇಂತಹ ಭವ್ಯವಾದ ಸಭಾಮಂದಿರ ನಿರ್ಮಾಣವಾಗಿದೆ. ಜಗತ್ತಿನಲ್ಲಿ ನಾವು ಮಾಡಿರುವುದು ಯಾವುದೂ ಉಳಿಯಲ್ಲ. ದಾನ, ಧರ್ಮ, ಪರೋಪಕಾರದಂತಹ ಕಾರ್ಯಗಳನ್ನು ಮಾಡಿದರೆ ಆ ಭಗವಂತ ಅವರಿಗೆ ಎರಡು ಪಟ್ಟು ವಾಪಸ್ ಕೊಡುತ್ತಾನೆ ಎಂದು ಹೇಳಿದರು.

ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು ಮಾತನಾಡಿ, ಶ್ರೀಮಠದ ಸದ್ಭಕ್ತರಿಂದ ಸಹಾಯ, ಸಹಕಾರದಿಂದ ₹50ಲಕ್ಷ ವೆಚ್ಚದಲ್ಲಿ ಭವ್ಯವಾದ ಕಪ್ಪರ ಪಡಿಯಮ್ಮ ಸಭಾಮಂದಿರ ೨ ತಿಂಗಳಲ್ಲಿ ಸದ್ಭಕ್ತರ ಪರಿಶ್ರಮದಿಂದ ನಿರ್ಮಾಣವಾಗಿರುವುದು ಈ ಗ್ರಾಮದ ಸದ್ಭಕ್ತರಲ್ಲಿರುವ ಭಕ್ತಿ ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ದಿಗಂಬರೇಶ್ವರ ಮಠದ ಶೇಷಪ್ಪಯ್ಯ ನಿಂಗಪ್ಪಯ್ಯ ಗುರುಶೇಷಪ್ಪಯ್ಯ ಶ್ರೀ ನೇತೃತ್ವ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಇಂಗಳೇಶ್ವರ ವಚನ ಶಿಲಾಮಂಟಪ ವಿರಕ್ತಮಠದ ಚನ್ನಬಸವ ಶ್ರೀ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಶ್ರೀ, ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀ, ಸುನಗ ಅನ್ನಪೂರ್ಣೆಶ್ವರಿ ಬೃಹನ್ಮಠದ ಶಿವಾನಂದ ಶ್ರೀ, ಬೀಳಗಿ ಹುಚ್ಚಪ್ಪಯ್ಯ ಮಠದ ಫಕೀರಯ್ಯ ಶ್ರೀ ಮಾತನಾಡಿದರು. ಬೀಳಗಿ ಸೋಮಪ್ಪಯ್ಯ ಮಠದ ಚನ್ನಬಸವ ಶ್ರೀ, ಸಿದ್ದಾಪೂರ ಮಾನಪ್ಪಯ್ಯ ಹುಚ್ಚಪ್ಪಯ್ಯ ಶ್ರೀ, ಇದ್ದರು.