ಕೇಂದ್ರದಿಂದ ರಾಜ್ಯಕ್ಕೆ ₹1.85 ಲಕ್ಷ ಕೋಟಿ ಅನುದಾನ ನಷ್ಟ

| Published : Apr 07 2024, 01:49 AM IST / Updated: Apr 07 2024, 07:02 AM IST

Krishna byregowda
ಕೇಂದ್ರದಿಂದ ರಾಜ್ಯಕ್ಕೆ ₹1.85 ಲಕ್ಷ ಕೋಟಿ ಅನುದಾನ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಸಮಯದಲ್ಲಿ ತೆರಿಗೆ ಅನ್ಯಾಯದ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕಕ್ಕೆ 1.85 ಲಕ್ಷ ಕೋಟಿ ರು. ನಷ್ಟ ವುಂಟಾಗಿದೆ - ಕೃಷ್ಣ ಬೈರೇಗೌಡ

 ಬೆಂಗಳೂರು :  ಲೋಕಸಭಾ ಚುನಾವಣೆ ಸಮಯದಲ್ಲಿ ತೆರಿಗೆ ಅನ್ಯಾಯದ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕಕ್ಕೆ ಜಿಎಸ್‌ಟಿ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರದಲ್ಲಿ 1.85 ಲಕ್ಷ ಕೋಟಿ ರು. ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದ್ದಾರೆ.

ಜಾಗೃತ ಕರ್ನಾಟಕ, ರಾಜ್ಯ ರೈತ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ಶನಿವಾರ ಗಾಂಧಿಭವನದಲ್ಲಿ ‘ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆದ ಅನ್ಯಾಯವೆಷ್ಟು?’ ವಿಷಯದ ಕುರಿತು ಏರ್ಪಡಿಸಿದ್ದ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

1.85 ಲಕ್ಷ ಕೋಟಿ ರು. ಆದಾಯ ನಷ್ಟ:

ವರ್ಷದಿಂದ ವರ್ಷಕ್ಕೆ ರಾಜ್ಯದಿಂದ ಜಿಎಸ್ಟಿ ಸಂಗ್ರಹ ಶೇ. 14ರಷ್ಟು ಹೆಚ್ಚುತ್ತಿದೆ. ಆದರೆ, ರಾಜ್ಯಕ್ಕೆ ನೀಡುವ ಪಾಲು ಮಾತ್ರ ಕಡಿಮೆಯಾಗುತ್ತಿದೆ. ಜಿಎಸ್ಟಿ ಜಾರಿಯಾದಾಗಿನಿಂದ ರಾಜ್ಯಕ್ಕೆ ಜಿಎಸ್ಟಿ ಸಂಗ್ರಹದಿಂದ 4.92 ಲಕ್ಷ ಕೋಟಿ ರು. ಜಿಎಸ್ಟಿ ಆದಾಯ ಬರಬೇಕಿದ್ದು, 3.26 ಲಕ್ಷ ಕೋಟಿ ರು. ಮಾತ್ರ ಕೇಂದ್ರ ಸರ್ಕಾರ ಹಿಂದಿರುಗಿಸಿದೆ. 1.65 ಲಕ್ಷ ರು. ಜಿಎಸ್ಟಿ ಆದಾಯ ಖೋತಾದಲ್ಲಿ, 1.06 ಲಕ್ಷ ಕೋಟಿ ರು.ಗಳನ್ನು ನಷ್ಟ ಪರಿಹಾರವಾಗಿ ನೀಡಿದೆ. ಉಳಿದ 59,274 ಕೋಟಿ ರು. ಜಿಎಸ್ಟಿ ಆದಾಯ ಖೋತಾ ಆಗುವಂತಾಗಿದೆ.15ನೇ ಹಣಕಾಸು ಆಯೋಗವು ಕೇಂದ್ರದಿಂದ ನೀಡುವ ಅನುದಾನದಲ್ಲಿ ರಾಜ್ಯದ ಪಾಲನ್ನು 14ನೇ ಹಣಕಾಸು ಆಯೋಗಕ್ಕಿಂತ ಶೇ. 1.07ರಷ್ಟು ಕಡಿತಗೊಳಿಸಿದ್ದರಿಂದಲೂ ಆದಾಯ ಖೋತಾ ಆಗುವಂತಾಗಿದೆ. 2020-21ರಿಂದ 2025-26ರವರೆಗೆ 62 ಸಾವಿರ ಕೋಟಿ ರು.ನಷ್ಟು ಆದಾಯ ನಷ್ಟವುಂಟಾಗುವಂತಾಗಿದೆ. ಅಲ್ಲದೆ, ಆಯೋಗವು 2020-21ನೇ ಸಾಲಿಗೆ 5,495 ಕೋಟಿ ರು. ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡುವಂತೆ ಸೂಚಿಸಿತ್ತು. ಅದರ ಜತೆಗೆ ಆಯೋಗದ ಅಂತಿಮ ವರದಿಯಲ್ಲಿ 6,664 ಕೋಟಿ ರು. ವಿಶೇಷ ಅನುದಾನ ನೀಡುವಂತೆಯೂ ತಿಳಿಸಿತ್ತು. ಆದರೆ, ಅದ್ಯಾವುದನ್ನೂ ಕೇಂದ್ರ ಸರ್ಕಾರ ನೀಡಿಲ್ಲ ಎಂದರು.

ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲು ನೀಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಲವು ತೆರಿಗೆಗಳನ್ನು ಸೆಸ್‌ ಮತ್ತು ಸರ್‌ಚಾರ್ಜ್‌ ರೂಪದಲ್ಲಿ ಸಂಗ್ರಹಿಸುತ್ತಿದೆ. ಇದರಿಂದಾಗಿ ರಾಜ್ಯಕ್ಕೆ ಪ್ರತಿ ವರ್ಷ 8 ಸಾವಿರ ಕೋಟಿ ರು. ನಷ್ಟವುಂಟಾಗುತ್ತಿದ್ದು, ಈವರೆಗೆ 45,322 ಕೋಟಿ ರು. ಆದಾಯ ಖೋತಾ ಆಗುವಂತಾಗಿದೆ. ಈ ಎಲ್ಲದರಿಂದಾಗಿ ರಾಜ್ಯಕ್ಕೆ ಒಟ್ಟಾರೆ 1.85 ಲಕ್ಷ ಕೋಟಿ ರು. ಆದಾಯ ನಷ್ಟವುಂಟಾಗಿದೆ. ಮುಂದಿನ ದಿನಗಳಲ್ಲಿ ಜಿಎಸ್ಟಿ ನಷ್ಟ ಪರಿಹಾರ ನೀಡುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ ರಾಜ್ಯಕ್ಕಾಗುತ್ತಿರುವ ನಷ್ಟ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಬಜೆಟ್‌ ಗಾತ್ರಕ್ಕೆ ತಕ್ಕಂತೆ ಅನುದಾನವಿಲ್ಲ:

ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಹೆಚ್ಚುತ್ತಿದೆ. 2015-16ರಲ್ಲಿ 17 ಲಕ್ಷ ಕೋಟಿ ರು.ನಷ್ಟಿದ್ದ ಕೇಂದ್ರ ಬಜೆಟ್‌ ಗಾತ್ರ ಈಗ 45 ಲಕ್ಷ ಕೋಟಿ ರು.ಗೆ ತಲುಪಿದೆ. ಆದರೆ, ರಾಜ್ಯಕ್ಕೆ ನೀಡುತ್ತಿರುವ ಅನುದಾನ ಮಾತ್ರ ತೀರಾ ಕಡಿಮೆಯಿದೆ. 2017-18ರಲ್ಲಿ ಬಜೆಟ್‌ ಗಾತ್ರ ಶೇ. 2ರಷ್ಟು ಅನುದಾನ ರಾಜ್ಯಕ್ಕೆ ಬರುತ್ತಿತ್ತು. ಅದೇ ಈ ವರ್ಷ ಅದು ಶೇ. 1.23ಕ್ಕೆ ಇಳಿದಿದೆ. ಅಲ್ಲದೆ, ರಾಜ್ಯ ಬಜೆಟ್‌ನಲ್ಲಿ ಕೇಂದ್ರದ ಅನುದಾನದ ಪಾಲು ಶೇ. 23ಕ್ಕೆ ಇಳಿದಿದೆ. ಅದೇ ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯಕ್ಕಿಂತ 3 ಪಟ್ಟು ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.

ಸಮಾಧಾನ ಮಾಡಲು ಮೈಸೂರು ಪೇಟ ಹಾಕಿದೆವು:

ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಬರ ಪರಿಹಾರ ವಿತರಣೆಗೆ ಅನುಮೋದನೆ ನೀಡಬೇಕಿದ್ದ ಕೇಂದ್ರ ಸರ್ಕಾರದ ಉನ್ನತಮಟ್ಟದ ಸಮಿತಿಯ ಅಧ್ಯಕ್ಷರಾದ ಗೃಹ ಸಚಿವರನ್ನು ಭೇಟಿಯಾಗಿ ಮನವಿಯನ್ನೂ ಮಾಡಿಕೊಂಡಿದ್ದೇವೆ. ಅಲ್ಲದೆ, ಅವರನ್ನು ಸಮಾಧಾನ ಮಾಡಲು ಮೈಸೂರು ಪೇಟ ತೊಡಿಸಿ, ಶ್ರೀಗಂಧದ ಹಾರವನ್ನೂ ಹಾಕಿದೆವು. ಆದರೂ, ಅವರು ಪರಿಹಾರ ನೀಡಲಿಲ್ಲ. ಬದಲಿಗೆ ನಮ್ಮ ವಿರುದ್ಧವೇ ಸುಳ್ಳು ಆರೋಪ ಮಾಡಿದರು ಎಂದು ಕೃಷ್ಣ ಬೈರೇಗೌಡ ಹೇಳಿದರು.

ನಿರ್ಮಲಾ ಸೀತಾರಾಮನ್‌ ಗೈರು!

ಬಹಿರಂಗ ಚರ್ಚಾ ಕಾರ್ಯಕ್ರಮಕ್ಕೆ ಆಯೋಜಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೂ ಆಹ್ವಾನಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಅಲ್ಲದೆ, ಅವರಿಗಾಗಿ ಪ್ರತ್ಯೇಕ ಆಸನವನ್ನೂ ಕಾಯ್ದಿರಿಸಿದ್ದರು. ಆದರೆ, ಕಾರ್ಯಕ್ರಮಕ್ಕೆ ನಿರ್ಮಲಾ ಸೀತಾರಾಮನ್‌ ಅವರು ಮಾತ್ರ ಬರಲಿಲ್ಲ.