ಮ-ನರೇಗಾ ಹೆಸರು ಬದಲಾವಣೆಯಿಂದಾಗಿ ರಾಜ್ಯ ಸರ್ಕಾರಕ್ಕೆ ₹3 ಸಾವಿರ ಕೋಟಿ ನಷ್ಟ ಆಗುತ್ತದೆ. ಈವರೆಗೆ ಕೇಂದ್ರ ಸರ್ಕಾರವೇ ಪೂರ್ತಿ ಹಣ ಕೊಡಬೇಕಿತ್ತು. ಈಗ ರಾಜ್ಯ ಸರ್ಕಾರ ಶೇ.40ರಷ್ಟು ಭರಿಸಬೇಕಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮ-ನರೇಗಾ ಹೆಸರು ಬದಲಾವಣೆಯಿಂದಾಗಿ ರಾಜ್ಯ ಸರ್ಕಾರಕ್ಕೆ ₹3 ಸಾವಿರ ಕೋಟಿ ನಷ್ಟ ಆಗುತ್ತದೆ. ಈವರೆಗೆ ಕೇಂದ್ರ ಸರ್ಕಾರವೇ ಪೂರ್ತಿ ಹಣ ಕೊಡಬೇಕಿತ್ತು. ಈಗ ರಾಜ್ಯ ಸರ್ಕಾರ ಶೇ.40ರಷ್ಟು ಭರಿಸಬೇಕಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಜಿ ರಾಮ್ ಜಿ ಕುರಿತ ಹೊಸ ಕಾನೂನಿನ ಮೂಲಕ ಕೇಂದ್ರ ಸರ್ಕಾರ ಬಡವರು, ಕೂಲಿ ಕಾರ್ಮಿಕರ ಕೆಲಸವನ್ನು ಕಿತ್ತು ಕೊಳ್ಳುತ್ತಿದೆ. ಜಿ ರಾಮ್ ಜಿ ಅಂದರೆ, ರಾಮನ ಹೆಸರಲ್ಲ ಎಂದು ಅವರು ಕಿಡಿಕಾರಿದರು.ಈಗಾಗಲೇ ಜಿಎಸ್‌ಟಿ ಕಡಿಮೆ ಮಾಡಿದ್ದರಿಂದಲೂ ರಾಜ್ಯಕ್ಕೆ ತೊಂದರೆಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳಿಗೆ ಈ ರೀತಿ ಕೇಂದ್ರ ಸರ್ಕಾರ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ, ಬಜೆಟ್ ಕುರಿತು ಪ್ರತಿಕ್ರಿಯಿಸಿ, ಸಂಕ್ರಾಂತಿ ನಂತರ ಬಜೆಟ್ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.ಕಾಂಗ್ರೆಸ್ ಸರ್ಕಾರದ ಒಂದು ಸಾವಿರ ದಿನದ ಸಾಧನಾ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕೃಷ್ಣ ಭೈರೇಗೌಡ ಅವರು ಸಮಾವೇಶ ಮಾಡೋಣ ಎಂದು ಹೇಳಿದ್ದಾರೆ. ಕೃಷ್ಣ ಭೈರೇಗೌಡರೇ ಅದನ್ನು ನೋಡಿಕೊಳ್ಳುತ್ತಾರೆ ಎಂದರು.
ಬಳ್ಳಾರಿ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರ ಜೊತೆ ಮಂಗಳವಾರ ಮಾತನಾಡುತ್ತೇನೆ. ಆನಂತರ ಆ ಬಗ್ಗೆ ತೀರ್ಮಾನ ಮಾಡುತ್ತೇನೆ. ಈಗ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ಪೊಲೀಸರ ಕಾರ್ಯದಕ್ಷತೆ ಬಗ್ಗೆ ನಮಗೆ ಅನುಮಾನಗಳಿಲ್ಲ. ಘಟನೆ ಬಗ್ಗೆ ತನಿಖೆ ಮಾಡುವಲ್ಲಿ ಅವರು ನಿಪುಣರಿದ್ದಾರೆ. ಅವರು ತನಿಖೆ ಮಾಡಿ ವರದಿ ಕೊಡಲಿ. ಆನಂತರ ಬೇರೆ ತೀರ್ಮಾನ ಮಾಡುತ್ತೇವೆ ಎಂದರು.ತಲಾ ₹5 ಲಕ್ಷ ಪರಿಹಾರ ಘೋಷಣೆ:
ಮೈಸೂರು ಅರಮನೆ ಮುಂದೆ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಇದೇ ವೇಳೆ ಘೋಷಿಸಿದರು.ಹುಲಿಗಳ ಸೆರೆಗೆ ಸೂಚನೆ:
ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರು ಭಾಗದಲ್ಲಿ ಹುಲಿ ಸಂತತಿ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ಹುಲಿಗಳು ಬರುತ್ತಿವೆ. ಕೂಡಲೇ ಹುಲಿಗಳನ್ನು ಸೆರೆ ಹಿಡಿಯಲು ಸೂಚನೆ ನೀಡಿದ್ದೇನೆ. ಮೈಸೂರು ಭಾಗದಲ್ಲಿ ಹುಲಿಗಳನ್ನು ಬೇರೆ ಕಾಡಿಗೆ ಬಿಡಲು ತಿಳಿಸಿದ್ದೇನೆ ಎಂದು ತಿಳಿಸಿದರು.ರಾಗಾ ಸಮಯ ಕೊಟ್ಟರೆ ಭೇಟಿ ಮಾಡಿ ಸಂಪುಟ ವಿಸ್ತರಣೆ:ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಸುತ್ತೇನೆ. ಅವರು ಸಮಯ ಕೊಟ್ಟಾಗ ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಜನವರಿ ತಿಂಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಅವರು ಸಮಯ ಕೊಟ್ಟಾಗ ದೆಹಲಿಗೆ ಹೋಗಿ ಭೇಟಿ ಮಾಡುತ್ತೇನೆ. ಹೈಕಮಾಂಡ್ ಜೊತೆ ಚರ್ಚಿಸಿ ನಂತರ ಸಂಪುಟ ಪುನಾರಚನೆ ಕುರಿತು ತೀರ್ಮಾನ ಮಾಡುತ್ತೇನೆ ಎಂದರು.