ಸಾರಾಂಶ
ಸಾಗರ: ವಿಪರೀತ ಮಳೆಯಿಂದ ಸುಮಾರು ಕ್ಷೇತ್ರ ವ್ಯಾಪ್ತಿಯಲ್ಲಿ ೨೦ ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ೫೦ ಅಂಗನವಾಡಿ, ೨೬೫ ಶಾಲೆ, ೨೩ ರಸ್ತೆ, ೧೫ ಸೇತುವೆಗೆ ಹಾನಿಯಾಗಿದ್ದು, ೧೦ ಕಡೆ ಭೂಕುಸಿತವಾಗಿದೆ. ಇದರ ಜೊತೆಗೆ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಗಾಳಿಮಳೆಗೆ ಮುರಿದು ಹೋಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಳೆಹಾನಿ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುತ್ತಿದ್ದು ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.ಬೆಳೆಗಾರರಿಗೆ ಅಡಕೆ ಕೊಳೆರೋಗಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಪರೀತ ಮಳೆಯಿಂದ ಕ್ಷೇತ್ರವ್ಯಾಪ್ತಿಯ ಸಾಕಷ್ಟು ಅಡಕೆ ತೋಟಗಳಲ್ಲಿ ಕೊಳೆಯಿಂದ ಫಸಲು ನಷ್ಟವಾಗಿದ್ದು ಬೆಳೆಗಾರರು ಆತಂಕದಲ್ಲಿದ್ದಾರೆ. ಕೊಳೆರೋಗಕ್ಕೆ ಪರಿಹಾರ ಒದಗಿಸಲು ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ ಅವರು, ಮಳೆಯಿಂದಾಗಿ ಜೋಳ, ಭತ್ತದ ಫಸಲಿಗೂ ಹಾನಿಯಾಗಿದೆ. ಅಧಿಕಾರಿಗಳು ವರದಿ ತಯಾರಿಸುವಾಗ ನಿಖರ ಮಾಹಿತಿ ಇರಲಿ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಗ್ರಹ ಇದ್ದು, ರೈತರಿಗೆ ಬಿತ್ತನೆಬೀಜ ಹಾಗೂ ರಸಗೊಬ್ಬರ ವಿತರಿಸಲಾಗುತ್ತದೆ. ಇದರ ಜೊತೆಗೆ ನ್ಯಾನೋ ಯೂರಿಯಾ ಬಳಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ಅಧಿಕಾರಿಗಳು ಮಳೆಗಾಲದಲ್ಲಿ ಕೆಲಸಕ್ಕೆ ರಜೆ ಹಾಕದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮೆಸ್ಕಾಂ ಜೆಇಗಳು ಸಾರ್ವಜನಿಕರು ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿರುತ್ತಾರೆ ಎನ್ನುವ ದೂರುಗಳಿದ್ದು, ಅಂತಹವರಿಗೆ ನೋಟಿಸ್ ನೀಡಲು ಸೂಚಿಸಿದರು.ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ಕೃಷಿ ಅಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಟಿ.ಪಿ.ರಮೇಶ್ ಇನ್ನಿತರರು ಇದ್ದರು.
ಸುತ್ತೋಲೆ ಹಿಂದಕ್ಕೆ ಪಡೆಯಲಾಗಿದೆ ಅರಣ್ಯ ಪ್ರದೇಶದಲ್ಲಿ ಸಾಕುಪ್ರಾಣಿಗಳನ್ನು ಮೇಯಲು ಬಿಡಬಾರದು ಎಂದು ಅರಣ್ಯ ಸಚಿವರು ನೀಡಿದ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆದಿದ್ದಾರೆ. ಸಚಿವರು ಆದೇಶ ಹಿಂದಕ್ಕೆ ಪಡೆದಿದ್ದರೂ ರೈತ ಸಂಘ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ವೈಯಕ್ತಿಕ ಪ್ರತಿಷ್ಠೆ ಬಿಟ್ಟು ರೈತ ಸಂಘಗಳು ಪ್ರತಿಭಟನೆ ನಡೆಸಬೇಕು. ಈಚೆಗೆ ಕೆರೋಡಿ ಗ್ರಾಮದ ರೈತನ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ನಾಶ ಮಾಡಿದೆ ಎಂದು ಪ್ರತಿಭಟನೆ ಮಾಡಿದ್ದರು. ಆದರೆ ಊರಿನ ಜಮೀನಿನಲ್ಲಿ ಕೃಷಿ ಮಾಡಿದ್ದರಿಂದ ಊರಿನವರು ತೆರವು ಮಾಡಿದ್ದಾರೆ. ರೈತ ಸಂಘದವರು ವಿಷಯ ತಿಳಿಯದೆ ಪ್ರತಿಭಟನೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.