ಜನೋತ್ಸವವಾಗಿ ಹಂಪಿ ಉತ್ಸವ, ಭರದ ಸಿದ್ಧತೆ

| Published : Jan 28 2024, 01:18 AM IST

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆ. 2, 3, 4ರಂದು ನಾಲ್ಕು ವೇದಿಕೆಗಳಲ್ಲಿ ಹಂಪಿ ಉತ್ಸವ ನಡೆಯಲಿದೆ. ಉತ್ಸವವನ್ನು ಜನೋತ್ಸವವನ್ನಾಗಿಸಲು ಭಾರೀ ಸಿದ್ಧತೆಯೂ ನಡೆದಿದೆ. ಹಂಪಿಯನ್ನು ನವವಧುವಿನಂತೆ ಸಜ್ಜುಗೊಳಿಸಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆ. 2, 3, 4ರಂದು ನಾಲ್ಕು ವೇದಿಕೆಗಳಲ್ಲಿ ಹಂಪಿ ಉತ್ಸವ ನಡೆಯಲಿದೆ. ಉತ್ಸವವನ್ನು ಜನೋತ್ಸವವನ್ನಾಗಿಸಲು ಭಾರೀ ಸಿದ್ಧತೆಯೂ ನಡೆದಿದೆ. ಹಂಪಿಯನ್ನು ನವವಧುವಿನಂತೆ ಸಜ್ಜುಗೊಳಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 2ರಂದು ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉತ್ಸವಕ್ಕೆ ತಯಾರಿ ಜೋರಾಗಿಯೇ ನಡೆದಿದೆ. ಈಗಾಗಲೇ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಹಂಪಿ ಉತ್ಸವ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಿದ್ದಾರೆ. ಖುದ್ದು ಹಂಪಿಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಫೆ. 2ರಿಂದ ಮೂರು ದಿನಗಳ ವರೆಗೆ ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಈ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರು ಕೂಡ ಭಾಗವಹಿಸಲಿದ್ದಾರೆ.

ದರ್ಶನ್‌, ರವಿಚಂದ್ರನ್‌ ಆಗಮನ: ಹಂಪಿ ಉತ್ಸವದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌, ಕ್ರೇಜಿಸ್ಟಾರ್‌ ರವಿಚಂದ್ರನ್‌, ಡಾಲಿ ಧನಂಜಯ್‌, ಅಜೇಯರಾವ್‌, ಸಾಧುಕೋಕಿಲ ಸೇರಿದಂತೆ ಸ್ಯಾಂಡಲ್‌ವುಡ್‌ನ ನಟ, ನಟಿಯರು ಆಗಮಿಸುತ್ತಿದ್ದಾರೆ. ಈಗಾಗಲೇ ಸಾಧುಕೋಕಿಲ ಅವರು ಹಂಪಿಗೆ ಭೇಟಿ ನೀಡಿ ವೇದಿಕೆಗಳ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಕನ್ನಡ ನಾಡಿನ ಕಲೆಯನ್ನು ಇಡೀ ವಿಶ್ವಕ್ಕೆ ಉಣ ಬಡಿಸುವ ಸದಾಶಯದೊಂದಿಗೆ ಸಿನಿಮಾ ನಟರು ಕೂಡ ಹಂಪಿ ಉತ್ಸವಕ್ಕೆ ಆಗಮಿಸುತ್ತಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಕೂಡ ಹಂಪಿ ಉತ್ಸವಕ್ಕೆ ಆಗಮಿಸುತ್ತಿದ್ದು, ಉತ್ಸವದ ತಯಾರಿಯೂ ಭರದಿಂದ ಸಾಗಿದೆ.

ಸಾಂಸ್ಕೃತಿಕ ಲೋಕದ ಅನಾವರಣ:

ಹಂಪಿ ಉತ್ಸವದಲ್ಲಿ ನಾಡಿನ ಕಲೆ ಅನಾವರಣಗೊಳ್ಳಲಿದೆ. ಸಾಂಸ್ಕೃತಿಕ ಲೋಕವೇ ಸೃಷ್ಟಿಯಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಇತರ ರಾಜ್ಯಗಳ ಕಲಾವಿದರು ಹಂಪಿಗೆ ಆಗಮಿಸಿ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ ಹಂಪಿಯ ಗಾಯತ್ರಿ ಪೀಠದ ಬಳಿ ಪ್ರಧಾನ ವೇದಿಕೆ, ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಮೂರನೇ ವೇದಿಕೆ ಮತ್ತು ಸಾಸಿವೆ ಕಾಳು ಗಣಪತಿ ಮಂಟಪದ ಬಳಿ ನಾಲ್ಕನೇ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಎತ್ತುಬಂಡಿಗಳ ಪ್ರದರ್ಶನ, ಕುರಿಗಳ ಮೇಳ, ಶ್ವಾನ ಪ್ರದರ್ಶನ, ಸಿರಿ ಧಾನ್ಯ ಮೇಳ, ಕುಸ್ತಿ, ಬಂಡಿಗಾಲಿ ತೊಡಿಸುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಕೂಡ ನಡೆಯಲಿವೆ. ಹೊಸಪೇಟೆಯಿಂದ ಹಂಪಿಗೆ ಉಚಿತವಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಹಂಪಿಯ ಸ್ಮಾರಕಗಳು ವಿದ್ಯುದೀಪಾಲಂಕಾರದಿಂದ ಕಂಗೊಳಿಸಲಿವೆ. ಇದಕ್ಕಾಗಿ ವ್ಯವಸ್ಥೆ ಕೂಡ ಮಾಡಲಾಗಿದೆ. ಹೊಸಪೇಟೆಯಲ್ಲೂ ವಿದ್ಯುದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಉತ್ಸವದಲ್ಲಿ ಕಲೆಯನ್ನು ಅನಾವರಣಗೊಳಿಸಲು ಎಲ್ಲ ಸಿದ್ಧತೆಯೂ ನಡೆದಿದೆ. ಕಡ್ಡಿರಾಂಪುರದ ಕ್ರಾಸ್‌ನ ಕಮಾನಿಗೂ ಅಲಂಕಾರ ಮಾಡಲಾಗಿದೆ. ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯವರೆಗೂ ವಿದ್ಯುದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್‌ಗೆ ವ್ಯವಸ್ಥೆ:

ಹಂಪಿ ಉತ್ಸವದಲ್ಲಿ ಪಾರ್ಕಿಂಗ್‌ ಸಮಸ್ಯೆ ಪರಿಹರಿಸಲು 50ರಿಂದ 60 ಎಕರೆಯಷ್ಟು ರೈತರು ಜಮೀನು ನೀಡಿದ್ದಾರೆ. ಕಡ್ಡಿರಾಂಪುರ ಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪಾರ್ಕಿಂಗ್‌ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲು ಪೊಲೀಸ್‌ ಇಲಾಖೆ ಕ್ರಮವಹಿಸಿದೆ. ಕಾರು, ಬೈಕ್‌, ಇತರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ಸರ್ಕಾರಿ ಬಸ್‌ಗಳ ಓಡಾಟ, ತಂಗುದಾಣಕ್ಕೂ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಹಂಪಿ ಉತ್ಸವದಲ್ಲಿ ಜನರಿಗೆ ಆದ್ಯತೆ ನೀಡಲಾಗುತ್ತಿದ್ದು, ಎಲ್ಲ ವೇದಿಕೆಗಳ ಬಳಿಯೂ ಸಾರ್ವಜನಿಕರಿಗೆ ಆದ್ಯತೆ ನೀಡಲು ಈಗಾಗಲೇ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಸೂಚಿಸಿದ್ದಾರೆ. ಹಾಗಾಗಿ ಜನರಿಗೆ ಕಿರಿಕಿರಿಯನ್ನುಂಟು ಮಾಡದೇ ವೇದಿಕೆಗಳ ಮುಂಭಾಗ ಪ್ರವೇಶ ನೀಡಬೇಕೆಂಬ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ. ಹಾಗಾಗಿ ಉತ್ಸವ ಯಶಸ್ವಿಗೊಳ್ಳುವ ಎಲ್ಲ ಲಕ್ಷಣವೂ ಗೋಚರಿಸಿದೆ.ಹಂಪಿ ಉತ್ಸವವನ್ನು ಈ ಬಾರಿ ಜನೋತ್ಸವವನ್ನಾಗಿಸಲು ಎಲ್ಲ ಸಿದ್ಧತೆಯೂ ನಡೆದಿದೆ. ದರ್ಶನ್‌, ರವಿಚಂದ್ರನ್‌ ಸೇರಿದಂತೆ ಸಿನಿಮಾ ನಟರು ಆಗಮಿಸಲಿದ್ದಾರೆ. ಉತ್ಸವ ಯಶಸ್ವಿಗೊಳಿಸಲು ಎಲ್ಲ ತಯಾರಿ ನಡೆದಿದೆ. ವಿಜಯನಗರದ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ಉತ್ಸವ ನಡೆಸಲಾಗುವುದು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯ ನಡೆದಿದೆ. ಉತ್ಸವದ ತಯಾರಿಗಾಗಿ ಅಧಿಕಾರಿಗಳ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಆಯಾ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ. ಪಾರ್ಕಿಂಗ್‌ಗಾಗಿ ರೈತರೇ 50ರಿಂದ 60 ಎಕರೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ಅಚ್ಚುಕಟ್ಟಾಗಿ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಹೇಳಿದರು.

ಹಂಪಿ ಉತ್ಸವ ನಾಡಿನಲ್ಲೇ ಖ್ಯಾತಿ ಪಡೆದಿದೆ. ಇದು ಸಾಂಸ್ಕೃತಿಕ ಉತ್ಸವವಾಗಿದ್ದು, ಕಲಾವಿದರು ತಮ್ಮ ಕಲೆಯನ್ನು ಅನಾವರಣಗೊಳಿಸಲು ವೇದಿಕೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಬಾರಿ ಹಂಪಿ ಉತ್ಸವ ಅಚ್ಚುಕಟ್ಟಾಗಿ ನಿರ್ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ನಟ ಸಾಧು ಕೋಕಿಲ ಹೇಳಿದರು.