ಜಿಗಜಿಣಗಿ ಊರಲ್ಲಿ ಕೈ ಅಭ್ಯರ್ಥಿ ಅಬ್ಬರದ ಪ್ರಚಾರ

| Published : Apr 30 2024, 02:02 AM IST

ಜಿಗಜಿಣಗಿ ಊರಲ್ಲಿ ಕೈ ಅಭ್ಯರ್ಥಿ ಅಬ್ಬರದ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಇಂಡಿ ಕ್ಷೇತ್ರದ ಅಥರ್ಗಾದಲ್ಲಿ ಭಾನುವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಸಿಕ್ಕ ಬೆಂಬಲದಿಂದಾಗಿ ಕಾಂಗ್ರೆಸ್‌ಗೆ ಮತ್ತಷ್ಟು ಆತ್ಮವಿಶ್ವಾಸ ಬಂದಂತಾಗಿದೆ. ಇದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತವರೂರಾಗಿದ್ದು, ಇಲ್ಲಿ ಕಾಂಗ್ರೆಸ್‌ನಿಂದ ಭರ್ಜರಿ ಪ್ರಚಾರ ನಡೆಸಲಾಯಿತು. ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಊರು ಕೂಡ ಹೌದು.

ಕನ್ನಡಪ್ರಭ ವಾರ್ತೆ ವಿಜಯಪುರಇಂಡಿ ಕ್ಷೇತ್ರದ ಅಥರ್ಗಾದಲ್ಲಿ ಭಾನುವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಸಿಕ್ಕ ಬೆಂಬಲದಿಂದಾಗಿ ಕಾಂಗ್ರೆಸ್‌ಗೆ ಮತ್ತಷ್ಟು ಆತ್ಮವಿಶ್ವಾಸ ಬಂದಂತಾಗಿದೆ. ಇದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತವರೂರಾಗಿದ್ದು, ಇಲ್ಲಿ ಕಾಂಗ್ರೆಸ್‌ನಿಂದ ಭರ್ಜರಿ ಪ್ರಚಾರ ನಡೆಸಲಾಯಿತು. ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಊರು ಕೂಡ ಹೌದು.

ಸಭೆಗೂ ಮುನ್ನ ಆಲಗೂರ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲರು ಅಥರ್ಗಾ ಹೊರ ವಲಯ ತಲುಪುತ್ತಿದ್ದಂತೇ ಕಾರ್ಯಕರ್ತರು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದರು. ಹಲಗಿ, ಬಾಜಾ ಭಜಂತ್ರಿ, ಕುಣಿತಗಳು ಸಮೇತ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಈ ಬಾರಿ ನೀವು ಗೆದ್ದೇ ಗೆಲ್ಲುತ್ತೀರಿ ಎಂದು ಅಲಗೂರಗೆ ಸ್ಥಳೀಯರು ಅಭಯ ನೀಡಿದರು.

ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ನೀವು ನಿಮ್ಮೂರವರಿಗೆ ಬಹಳ ಅವಕಾಶ, ಅಧಿಕಾರ ನೀಡಿದ್ದೀರಿ. ಆದರೆ ನಿಮಗೆ ಅವರು ವಾಪಸ್‌ ಏನು ಕೊಟ್ಟಿದ್ದಾರೆ? ಸುಮಾರು ಐವತ್ತು ವರ್ಷಗಳಿಂದ ಅಧಿಕಾರ ಅನುಭವಿಸಿದರೂ ನಿಮ್ಮ ಏಳ್ಗೆಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಜಿಗಜಿಣಗಿ ಅವರು ಶ್ರಮಿಸಲಿಲ್ಲ. ನಾವು ತಾಲೂಕಿನ ಕೆರೆಗಳನ್ನು ತುಂಬಿಸಿದ್ದೇವೆ, ನಿಂಬೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ರಸ್ತೆ, ಇಂಡಿ ಪಟ್ಟಣಕ್ಕೆ ನಿರಂತರ ನೀರು ಕೊಟ್ಟಿದ್ದೇವೆ. ಮುಂದೂ ಅನೇಕ ಕೆಲಸಗಳು, ಶಾಶ್ವತ ನೀರಾವರಿ ಯೋಜನೆ ಮಾಡುವುದಾಗಿ ಹೇಳಿದರು.

ಆಲಗೂರು ಪ್ರಾಧ್ಯಾಪಕರಾಗಿ ಇಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಪ್ರಬುದ್ಧರಾಗಿದ್ದಾರೆ, ಅವರಿಗೆ ಅವಕಾಶ ಸಿಕ್ಕರೆ ಸಂಸತ್‌ನಲ್ಲಿ ನಿಮ್ಮ ಧ್ವನಿಯಾಗಲಿದ್ದಾರೆ. ಅವರೊಬ್ಬ ಉತ್ತಮ ಸಂಸದೀಯ ಪಟುವಾಗಲಿದ್ದಾರೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು, ವಿಜಯಪುರವನ್ನು ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಲು ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವುದು, ಇಲ್ಲಿಗೆ ವೇಗದ ರೈಲುಗಳು, ವಿಮಾನಯಾನ ಸೇರಿದಂತೆ ಹತ್ತಾರು ಯೋಚನೆಗಳನ್ನು ರಾಜು ಆಲಗೂರರು ಹಾಕಿಕೊಂಡಿದ್ದಾರೆ. ಇದು ಅವರ ಬದ್ಧತೆ. ಕಾಂಗ್ರೆಸ್ ಪ್ರಣಾಳಿಕೆ ನೀಡಿ ಹಾಗೆಯೇ ನಡೆದುಕೊಳ್ಳುವ ಪಕ್ಷ. ಇದಕ್ಕೆ ಗ್ಯಾರಂಟಿ ಯೋಜನೆಗಳೇ ಸಾಕ್ಷಿ. ಇಂತಹ ಅಭ್ಯರ್ಥಿಗಳು ಆಯ್ಕೆಯಾದರೆ ನಮ್ಮ ಜಿಲ್ಲೆ ಪ್ರಗತಿ ಕಾಣಲಿದೆ. ರಾಜ್ಯ ಹಾಗೂ ಕೇಂದ್ರದಲ್ಲೂ ನಮ್ಮದೇ ಸರ್ಕಾರವಿದ್ದರೆ ಸಮಗ್ರ ಬದಲಾವಣೆ ಸಾಧ್ಯ ಎಂದು ಭರವಸೆ ನೀಡಿದರು.

ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ನಿಮ್ಮ ಅಭಿಮಾನ, ಪ್ರೀತಿ ಕಂಡು ಮೂಕನಾಗಿರುವೆ. ನನಗೆ ಮತ ನೀಡಿದರೆ ಇಷ್ಟು ವರ್ಷಗಳ ಕಾಲ ನೀವು ಅಭಿವೃದ್ಧಿಯಿಂದ ವಂಚಿತರಾಗಿದ್ದನ್ನು ಮರೆಮಾಚಿ, ಈ ವಿಜಯಪುರ ಲೋಕಸಭೆ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಹಗಲು-ರಾತ್ರಿ ಶ್ರಮಿಸುವೆ. ನಿಮ್ಮ ಸೇವಕನಾಗಿ ದುಡಿಯುವೆ ಎಂದು ಹೇಳಿದರು.

ಮುಖಂಡರಾದ ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಎಂ.ಆರ್‌.ಪಾಟೀಲ, ಎಸ್.ಆರ್.ಸಿಂದಗಿ, ಎಂ.ಆರ್.ಪತಂಗಿ, ರೇವಣಸಿದ್ಧ ಅಂಕಲಗಿ, ಇಲಿಯಾಸ್ ಬೋರಾಮಣಿ, ಜಾವೇದ್ ಮೋಮಿನ್ ಸೇರಿದಂತೆ ಅನೇಕರಿದ್ದರು. ಇದೇ ವೇಳೆ ಜೆಡಿಎಸ್ ಪಕ್ಷ ತೊರೆದು ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.