ಪ್ರೇಮ ಪ್ರಕರಣ: ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

| Published : May 04 2024, 12:31 AM IST

ಸಾರಾಂಶ

ಬೆಳಗಾವಿ ಜಿಲ್ಲೆ ಒಂಟಮುರಿ ಪ್ರಕರಣ ಜನಮನದಿಂದ ಮಾಸುವ ಮುನ್ನವೇ ಅದೇ ರೀತಿಯಲ್ಲಿಯೇ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಜರುಗಿದೆ.

ರಾಣಿಬೆನ್ನೂರು: ಬೆಳಗಾವಿ ಜಿಲ್ಲೆ ಒಂಟಮುರಿ ಪ್ರಕರಣ ಜನಮನದಿಂದ ಮಾಸುವ ಮುನ್ನವೇ ಅದೇ ರೀತಿಯಲ್ಲಿಯೇ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಹನಮವ್ವ ದುರಗಪ್ಪ ಮೆಡ್ಲೇರಿ (50) ಹಲ್ಲೆಗೊಳಗಾದ ಮಹಿಳೆ. ಹಲ್ಲೆಗೆ ಒಳಗಾದ ಮಹಿಳೆಯ ಪುತ್ರ ಮಂಜುನಾಥ ಹಾಗೂ ಅದೇ ಗ್ರಾಮದ ಭರಮಪ್ಪ ಗಂಗಪ್ಪ ತೆಲಗಿ ಎಂಬುವರ ಮಗಳಾದ ಸುನಿತಾಳನ್ನು (ಹೆಸರು ಬದಲಿಸಲಾಗಿದೆ) ಸುಮಾರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಏ. 30ರಂದು ತಮ್ಮ ಮಗಳು ಕಾಣೆಯಾಗಿದ್ದರಿಂದ ಅವಳನ್ನು ಮಂಜುನಾಥನೇ ಅಪಹರಣ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯ ಸಂಬಂಧಿಕರಾದ ಚಂದ್ರಪ್ಪ ತೆಲಗಿ, ಬಸಪ್ಪ ತೆಲಗಿ, ಗುತ್ತೆವ್ವ ತೆಲಗಿ ಸೇರಿಕೊಂಡು ಯುವಕನ ಮನೆಗೆ ನುಗ್ಗಿ ಆತನ ತಾಯಿಯನ್ನು ಮನೆಯಿಂದ ಹೊರಗೆ ಎಳೆದುತಂದು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಸ್ಥಳೀಯರು ಸೇರಿ ಗಾಯಾಳು ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಹಲ್ಲೆಗೊಳಗಾದ ಹನಮವ್ವ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿತರನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಯುವತಿಯ ತಾಯಿಯಿಂದ ಪ್ರತಿ ದೂರು: ಇದೇ ಘಟನೆಗೆ ಸಂಬಂಧಿಸಿದಂತೆ ಯುವತಿಯ ತಾಯಿ ಚಂದ್ರಮ್ಮ ಭರಮಪ್ಪ ತೆಲಗಿ ಮೇ 1ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ಯುವಕ ಮಂಜಪ್ಪ ಹಾಗೂ ಆತನ ಸಹಚರ ತುಮ್ಮಿನಕಟ್ಟಿ ಗ್ರಾಮದ ಬಸವರಾಜ ತುಮ್ಮಿನಕಟ್ಟಿ ಸೇರಿಕೊಂಡು ಏ. 30ರಂದು ನಮ್ಮ ಮನೆ ಬಳಿ ಕಾರು ನಿಲ್ಲಿಸಿ ಮನೆಯೊಳಗಿದ್ದ ನಮ್ಮ ಮಗಳನ್ನು ಪುಸಲಾಯಿಸಿ 3 ತೊಲೆ ಚಿನ್ನದ ಅವಲಕ್ಕಿ ಸರ ಹಾಗೂ 2 ಲಕ್ಷ ರು.ದೊಂದಿಗೆ ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೊರಟ್ಟಿದ್ದರು. ಆಗ ಚಂದ್ರಮ್ಮ, ಆಕೆಯ ಗಂಡ ಭರಮಪ್ಪ ಹಾಗೂ ಮಕ್ಕಳು ಅವರನ್ನು ತಡೆಯಲು ಹೋದಾಗ ಆರೋಪಿತರು ನಮ್ಮ ಮೇಲೆ ಹಲ್ಲೆ ಮಾಡಿ ಪರಾರಿಯಾದರು. ಈ ವಿಷಯ ಕುರಿತು ಯುವಕನ ತಾಯಿ ಹನುಮವ್ವಳ ಜತೆ ಪಂಚಾಯಿತಿ ಮಾಡಿ ಆಕೆಗೆ ತಮ್ಮ ಮಗಳನ್ನು ವಾಪಾಸು ಕರೆದುಕೊಂಡು ಬರುವಂತೆ ತಿಳಿಸಲಾಯಿತು. ಅದಕ್ಕೆ ಸಮ್ಮತಿಸಿದ ಹನುಮವ್ವಳು ತನ್ನ ಮನೆಗೆ ತೆರಳುತ್ತಿರುವಾಗ ಅರೇಮಲ್ಲಾಪುರ ಗ್ರಾಮದವರಾದ ಮಂಜಪ್ಪ ಕೊಟ್ರಪ್ಪ ಕಲ್ದುಂಡಿ, ಮಲ್ಲಿಕಾರ್ಜುನ ಕಲ್ದುಂಡಿ, ಯಲ್ಲವ್ವ ರಾಮಪ್ಪ ಮಿಳ್ಳಿ, ಸಿದ್ದಪ್ಪ ರಾಮಪ್ಪ ಮಿಳ್ಳಿ, ಕುಮಾರ ಕರಿಯಪ್ಪ ನಿಟ್ಟೂರ, ಹನುಮಂತಪ್ಪ ಮಂಜಪ್ಪ ನಿಟ್ಟೂರ, ಹನುಮವ್ವ ದುರುಗಪ್ಪ ಮೆಡ್ಲೇರಿ, ಕರಿಯಪ್ಪ ನಿಟ್ಟೂರ, ಹಾಗೂ ದಾವಣಗೆರೆಯ ಗೀತಾ ಪ್ರಕಾಶ ಮಿಳ್ಳಿ, ಹೊನ್ನಳ್ಳಿ ತಾಲೂಕು ಹೊಸಳ್ಳಿಯ ಬಸಮ್ಮ ನಾಗರಾಜ ಮಿಳ್ಳಿ ಸೇರಿಕೊಂಡು ಭರಮಪ್ಪ ತೆಲಿಗಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಆತನ ಪತ್ನಿ ಚಂದ್ರಮ್ಮಳ ವಸ್ತ್ರ ಹರಿದು ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇಷ್ಟೆಲ್ಲ ಘಟನೆ ನಡೆದಿದ್ದರೂ ಪರಾರಿಯಾಗಿರುವ ನವಜೋಡಿ ಇನ್ನೂ ಪತ್ತೆಯಾಗಿಲ್ಲ.