ಹುಬ್ಬಳ್ಳಿ:
ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣದ ತನಿಖೆಯನ್ನು ಪೊಲೀಸರಿಗೆ ಒಪ್ಪಿಸದೆ, ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ವಹಿಸುವಂತೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.ನವನಗರದ ಹು-ಧಾ ಪೊಲೀಸ್ ಆಯುಕ್ತಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈಚೆಗೆ ನಗರದಲ್ಲಿ ಹಿಂದೂ ಯುವತಿಗೆ ದೌರ್ಜನ್ಯವೆಸಗಿದ ಆರೋಪಿ ಸಮೀರ್ ಮುಲ್ಲಾನ ಸಹೋದರಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆ. ಅವಳಿಗೆ ಕೇರಳ ನಂಟಿದೆ. ಈ ಹಿಂದೆ ಹಲವು ಬಾರಿ ಕೇರಳಕ್ಕೆ ಹೋಗಿರುವ ಕುರಿತು ಮಾಹಿತಿಯಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಸಮೀರ್‌ನ ಇಡೀ ಕುಟುಂಬದ ಹಿಂದೆ ಇಸ್ಲಾಮಿಕ್ ಶಕ್ತಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ಕೇಶ್ವಾಪುರದ ಹೋಟೆಲೊಂದರ ಮಾಲೀಕನು ಮದುವೆ ಮಾಡಿಸುವುದಾಗಿ ಹೇಳಿ ದುಡ್ಡು ಕೊಟ್ಟು ಲವ್ ಜಿಹಾದ್‌ಗೆ ಪ್ರೋತ್ಸಾಹಿಸುತ್ತಿದ್ದಾನೆ. ಕೇರಳ ಲವ್ ಜಿಹಾದ್‌ಗೂ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೂ ಸಂಬಂಧವಿದ್ದು ಈ ಪ್ರಕರಣಗಳನ್ನು ಎನ್‌ಐಎಗೆ ಒಪ್ಪಿಸಬೇಕು ಎಂದಿರುವ ಮುತಾಲಿಕ್, ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಿದ್ದು ನೈಜ ಆರೋಪಿಗಳನ್ನು ಬಂಧಿಸಿದೆ ಹಿಂದೂಗಳನ್ನೇ ಬಂಧಿಸಿ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹು-ಧಾ ಅವಳಿ ನಗರದಲ್ಲಿ ಲೈಸೆನ್ಸ್ ಇಲ್ಲದ ಜಿಮ್‌ಗಳು ಸಾಕಷ್ಟಿದ್ದು ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ. ಲವ್ ಜಿಹಾದ್ ಬಗ್ಗೆ ಮುಸ್ಲಿಂ ಮುಖಂಡರು, ಜಮಾತೆ, ಮುಲ್ಲಾ, ಮೌಲ್ವಿಗಳು ಮಾತನಾಡಬೇಕು. ಮಠಾಧಿಪತಿಗಳು ಮಠದ ಒಳಗೆ ಕುಳಿತು ಶಾಂತಿ ಹೇಳಿ, ಪ್ರವಚನ ನೀಡದೇ ಹೊರಬಂದು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಲವ್ ಜಿಹಾದ್‌ಗೆ ಸಂಬಂಧಪಟ್ಟಂತೆ ನಮ್ಮ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 60 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಧನ ಆಗುವುದಿದ್ದರೆ ನನ್ನನ್ನೇ ಮೊದಲ ಎ1 ಆರೋಪಿ ಮಾಡಿ ಬಂಧಿಸಬೇಕು. ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾರದೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಶ್ರೀರಾಮಸೇನೆ ಉತ್ತರ ಪ್ರಾಂತ ಗೌರವ ಅಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಪ್ರಮುಖರಾದ ಪ್ರವೀಣ ಮಾಳವದಕರ, ಬಸವರಾಜ ಗೌಡರ, ಅಣ್ಣಪ್ಪ ದಿವಟಗಿ, ಗುರನಗೌಡ ಪಾಟೀಲ, ಮಂಜುನಾಥ ಕಾಟಕರ, ಬಸವರಾಜ ದುರ್ಗದ ಸೇರಿದಂತೆ ಹಲವರಿದ್ದರು.