ಪ್ರತಿ ಟನ್ ಕಬ್ಬಿಗೆ 5,500 ರು. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ಕಳೆದ ಹಲವಾರು ದಿನಗಳಿಂದ ರಾಜ್ಯಾದ್ಯಂತ ರೈತರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆ ಬೆಂಬಲಿಸಿ ಹಳಿಯಾಳ ತಾಲೂಕು ಬಂದ್ ಘೋಷಿಸಿ, ರಸ್ತೆ ತಡೆ ನಡೆಸಿ ಹಕ್ಕುಗಳನ್ನು ಮಂಡಿಸಿದ್ದರು.
ಹಳಿಯಾಳ: ತಾಲೂಕಿನ ರೈತರ ಪಾಲಿಗೆ ಕಬ್ಬು ಬೆಳೆಯು ಸಿಹಿ ನೀಡುವ ಬದಲು ಕಹಿಯನ್ನೇ ನೀಡಿದೆ. ಬರಗಾಲದ ಸ್ಥಿತಿಯಲ್ಲಿ ಕಬ್ಬಿಗೆ ಉತ್ತಮ ದರ ಸಿಗಬೇಕು, ವೈಜ್ಞಾನಿಕ ಹಾಗೂ ಮಾನವೀಯತೆಯ ಆಧಾರದ ಮೇಲೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಉತ್ತಮ ದರ ನೀಡಬೇಕು ಎಂಬ ರೈತರ ಆಶಾಭಾವನೆ ಸದ್ಯ ಹುಸಿಯಾಗಿದ್ದು, ರೈತ ವರ್ಗ ಮರುಗಲಾರಂಭಿಸಿದ್ದು, ತಾಲೂಕಿನ ರೈತರು ಕಡಿಮೆ ದರಕ್ಕೆ ಕಬ್ಬು ಕಟಾವು ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಟನ್ ಕಬ್ಬಿಗೆ 5,500 ರು. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ಕಳೆದ ಹಲವಾರು ದಿನಗಳಿಂದ ರಾಜ್ಯಾದ್ಯಂತ ರೈತರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆ ಬೆಂಬಲಿಸಿ ಹಳಿಯಾಳ ತಾಲೂಕು ಬಂದ್ ಘೋಷಿಸಿ, ರಸ್ತೆ ತಡೆ ನಡೆಸಿ ಹಕ್ಕುಗಳನ್ನು ಮಂಡಿಸಿದ್ದರು.ನಂತರ ನಡೆದ ಬೆಳವಣಿಗೆಯಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವೆ ಒಪ್ಪಂದ ಏರ್ಪಟ್ಟು 3,600 ರು. ದರ ನಿಗದಿಯಾಯಿತು. ಆದರೆ ಅದೇ ಪಕ್ಕದ ಮಹಾರಾಷ್ಟ್ರದಲ್ಲಿ ರಿಕವರಿ ಆಧಾರದ ಮೇಲೆ ಹಾಗೂ ರೈತರ ಬೇಡಿಕೆಗೆ ಸ್ಪಂದಿಸಿ ಅಲ್ಲಿನ ಸರ್ಕಾರ ಮತ್ತು ಕಾರ್ಖಾನೆಗಳು ಒಟ್ಟಾರೆಯಾಗಿ 4,200 ರು. ದರ ನೀಡಲು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಇಐಡಿ ಪ್ಯಾರಿ ಕಾರ್ಖಾನೆಯಿಂದ ನಿರಾಶೆ: ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಇಐಡಿ ಪ್ಯಾರಿ ಸಂಸ್ಥೆಯು ಕೆಲವೇ ಕೆಲವು ಆಯ್ದ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ತಾಲೂಕಿನ ಕಬ್ಬು ಬೆಳೆಗಾರರಿಗೆ 3,500 ರು. ದರ ಘೋಷಣೆ ಮಾಡಿರುವುದು ತಾಲೂಕಿನ ರೈತರಿಗೆ ತೀವ್ರ ನಿರಾಶೆ ನೋವು ಉಂಟು ಮಾಡಿದೆ.ಕಬ್ಬಿಗೆ 12.19 ರಿಕ್ವರಿ: ತಾಲೂಕಿನಲ್ಲಿ ರೈತರು ಬೆಳೆದಿರುವ ಕಬ್ಬಿಗೆ 2025- 26ನೇ ಸಾಲಿನಲ್ಲಿ 12.19 ರಿಕ್ವರಿ ದೊರೆತಿದೆ. ಆದರೆ ನೆರೆಯ ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆಗಳ ರಿಕ್ವರಿ 11.50 ಇದೆ. ಇದು ಪ್ಯಾರಿ ಸಕ್ಕರೆ ಕಾರ್ಖಾನೆಯ ರಿಕವರಿಗಿಂತ ಕಡಿಮೆ. ಆದರೂ ಬೆಳಗಾವಿಯ ಕಾರ್ಖಾನೆಗಳು 3,600 ರು. ದರ ನೀಡಲು ಒಪ್ಪಿಕೊಂಡಿರುವಾಗ, ನಮ್ಮ ಹಳಿಯಾಳದ ಮುಖಂಡರು 3,500 ರು.ಗೆ ಏಕೆ ಒಪ್ಪಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಸವಾಲುಗಳು ಅಲ್ಲಲ್ಲಿ ಚರ್ಚೆಗೆ ಗ್ರಾಸವಾಗಿದೆ.12.19 ರಿಕವರಿ ಆಧಾರದ ಮೇಲೆ ಹಳಿಯಾಳದ ಬೆಳೆಗಾರರಿಗೆ 242 ರು.ಗಳಿಂದ 268 ರು. ವರೆಗೆ ದರ ದೊರೆಯಬೇಕು. ಆದರೆ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿ ವರ್ಗ ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ ತರಾತುರಿಯಲ್ಲಿ 3,500 ರು. ದರಕ್ಕೆ ಮೌನ ಸಮ್ಮತಿ ಸೂಚಿಸಿರುವುದು ಏಕೆ ಎಂಬಿತ್ಯಾದಿ ಪ್ರಶ್ನೆ ಸಂದೇಹಗಳು ಮೂಡಲಾರಂಭಿಸಿವೆ.
ನಮ್ಮ ಮುಖಂಡರು ವಿಫಲರಾದರೇ?: ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಮುಖಂಡರು ರಿಕವರಿ ಆಧಾರದ ಮೇಲೆ ಹಳಿಯಾಳ ತಾಲೂಕಿನ ರೈತರಿಗೆ 3,800- 3,900 ರು. ದರ ದೊರೆಯಬೇಕು ಎಂಬ ಹಕ್ಕನ್ನು ಮಂಡಿಸಬೇಕಾಗಿತ್ತು. ಆದರೇ ಈ ಹಕ್ಕೊತ್ತಾಯ ಮಂಡಿಸದ ಪರಿಣಾಮವೇ ತಾಲೂಕಿನ ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾಗಿದ್ದ ದರ ದೊರೆಯದೇ ಪರಿಣಾಮ ಕಡಿಮೆ ದರಕ್ಕೆ ಕಬ್ಬು ಕಟಾವು ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿರುವುದರಿಂದ ಇನ್ನೊಮ್ಮೆ ಕಬ್ಬಿನ ದರವನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಪ್ರಜ್ಞಾವಂತ ಹಾಗೂ ಪ್ರಗತಿಪರ ರೈತರು ಆಗ್ರಹಿಸುತ್ತಿದ್ದಾರೆ.ಗಡಿ ಭಾಗದ ಕಾರ್ಖಾನೆಗಳತ್ತ ಮುಖ: ಬೆಳಗಾವಿ ಹಾಗೂ ರಾಜ್ಯದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರ ರಾಜ್ಯದ ಕಾರ್ಖಾನೆಗಳು ಹೆಚ್ಚಿನ ದರ ನೀಡುತ್ತಿರುವ ಹಿನ್ನೆಲೆ ತಾಲೂಕಿನ ಕಬ್ಬು ಬೆಳೆಗಾರರು ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸಾಗಿಸದೆ ಹೆಚ್ಚಿನ ದರ ನೀಡುವ ಕಾರ್ಖಾನೆಗೆ ಕಬ್ಬು ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದು, ಅಲ್ಲಿನ ಕಾರ್ಖಾನೆಯ ಪ್ರತಿನಿಧಿಗಳ ಕಚೇರಿಗಳು ತೆರೆಯಲಾರಂಭಿಸಿವೆ.ಹೋರಾಟಕ್ಕೆ ಸದಾ ಸಿದ್ಧ: ರಿಕವರಿ ಆಧಾರದ ಮೇಲೆ ತಾಲೂಕಿನ ರೈತರಿಗೆ 3,900 ರು. ದರ ದೊರೆಯಬೇಕು. ರೈತರ ಬೆವರಿನ ಹನಿಗೆ ತಕ್ಕ ಬೆಲೆ ಸಿಗಬೇಕು. ಅನ್ನದಾತರಿಗೆ ಅನ್ಯಾಯವಾದರೆ ಬಿಜೆಪಿ ಹೋರಾಟಕ್ಕೆ ಸದಾ ಸಿದ್ಧವಿದೆ ಎಂದು ಮಾಜಿ ಶಾಸಕರಾದ ಸುನಿಲ್ ಹೆಗಡೆ ತಿಳಿಸಿದರು.