ಸಾರಾಂಶ
ಚಂದ್ರಶೇಖರ ಶಾರದಾಳ
ಕನ್ನಡಪ್ರಭ ವಾರ್ತೆ ಕಲಾದಗಿ2000ರಿಂದ ತುಳಸಿಗೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಬೇಕಾದ ಬಟ್ಟೆ ನೇಯ್ಗೆ ಮಾಡಲಾಗುತ್ತಿದೆ. ಆದರೆ, ಹಲವಾರು ವರ್ಷಗಳಿಂದ ಇಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಸೂಕ್ತ ವೇತನ ದೊರೆಯದ ಕಾರಣಕ್ಕೆ ಮಹಿಳೆಯರು ಈ ಉದ್ಯೋಗದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಸೂಕ್ತ ಸಂಬಳ ನೀಡಿ ಈ ರಾಷ್ಟ್ರಧ್ವಜಕ್ಕೆ ಬೇಕಾದ ನೇಯ್ಗೆ ಕಾರ್ಯವನ್ನು ಭದ್ರಪಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಹೌದು, ತುಳಸಿಗೇರಿಯ ಖಾದಿ ಕೇಂದ್ರವನ್ನು ಶ್ರೀವೆಂಕಟೇಶ ಮಾಗಡಿ ಅವರು ೧೯೮೧ರಲ್ಲಿ ಪ್ರಾರಂಭಿಸಿದರು. ಇಲ್ಲಿ ದಿನ ನಿತ್ಯ ೭೦ರಿಂದ ೮೦ ಮಹಿಳೆಯರು ಕೆಲಸ ಮಾಡಿಕೊಂಡು ಬರುತ್ತಿದ್ದರು. ಕೆಲವು ವರ್ಷಗಳಿಂದ ಇಲ್ಲಿ ದುಡಿಯುವರ ಸಂಖ್ಯೆ ೪೦ರಿಂದ ೫೦ಕ್ಕೆ ಕುಸಿದಿದೆ. ಇದಕ್ಕೆ ಕಾರಣ ಇಲ್ಲಿ ಇವರಿಗೆ ಸಿಗುವ ಪಗಾರ(ಸಂಬಳ). ಇಲ್ಲಿ ದುಡಿಯವರಿಗೆ ಒಂದು ದಿನಕ್ಕೆ ಸಿಗುವ ಸಂಬಳ ₹೧೫೦ ರಿಂದ ೧೮೦ ಮಾತ್ರ. ಅದು ಬೆಳಿಗ್ಗೆ ೮ಯಿಂದ ಸಂಜೆ ೬ ಗಂಟೆಯ ತನಕ ದುಡಿದಾಗ, ಓರ್ವ ಮಹಿಳೆ ದಿನಕ್ಕೆ ೧೦ ಲಡಿ ನೂಲನನ್ನು ತೆಗೆದರೆ, ಒಂದು ಲಡಿ ನೂಲಿಗೆ ₹೧೧.೫೦ ನೀಡಲಾಗುತ್ತದೆ. ೧೦ ಲಡಿಗೆ ₹೧೧೫ ಬಿದ್ದು ದಿನಕ್ಕೆ ₹೧೧೫ ಪಗಾರ ಆಗುತ್ತದೆ. ಬಟ್ಟೆ ನೇಯ್ಗೆ ಮಾಡುವ ಮಹಿಳೆ ಒಂದು ದಿನಕ್ಕೆ ೬ ಮೀಟರ್ ಬಟ್ಟೆ ನೇಯ್ಗೆ ಮಾಡುತ್ತಾರೆ. ಇದರಿಂದ ಒಂದು ಮೀಟರ್‌ಗೆ ₹೩೨ ನೀಡಲಾಗುತ್ತದೆ. ಇದರಿಂದ ದಿನವೊಂದಕ್ಕೆ ₹೧೯೨ ಸಂಬಳ ಬೀಳುವುದರಿಂದ ಈ ಸಂಬಳ ಇಂದಿನ ದಿನಮಾನದಲ್ಲಿ ಜೀವನ ನಡೆಸಲು ಸಾಕಾಗುತ್ತಿಲ್ಲ.2000ರಿಂದ ರಾಷ್ಟ್ರಧ್ವಜಕ್ಕೆ ಬಟ್ಟೆ ರವಾನೆ:
ಮೊದಲು ದೇಶದ ತುಂಬಾ ಹಾರಾಡುವ ರಾಷ್ಟ್ರಧ್ವಜ ತಯಾರಾಗುತ್ತಿದ್ದುದು ಧಾರವಾಡದ ಗರಗದ ಖಾದಿ ಕೇಂದ್ರದಲ್ಲಿ ನೇಯ್ದ ಬಟ್ಟೆಯಿಂದ. ೨೦೦೦ನೇ ಇಸವಿಯಿಂದ ರಾಷ್ಟ್ರಧ್ವಜ ತಯಾರಿ ಮಾಡುವ ನೂಲು ಮತ್ತು ಬಟ್ಟೆ ನೇಯ್ಗೆ ಮಾಡುವ ಅನುಮತಿಯನ್ನು ಕೇಂದ್ರ ಸರ್ಕಾರ ತುಳಸಿಗೇರಿಯ ಖಾದಿ ಕೇಂದ್ರಕ್ಕೆ ನೀಡಿತು. ಇಲ್ಲಿ ಸದ್ಯ ಒಂದು ತಿಂಗಳಿಗೆ ೨೫೦೦ ಮೀಟರ್ ಬಟ್ಟೆಯನ್ನು ನೇಯ್ಗೆ ಮಾಡಲಾಗುತ್ತದೆ. ಜಿಲ್ಲೆಯ ಸಿಮೀಕೇರಿ ಮತ್ತು ಬಾದಾಮಿಯ ಬಳಿಯ ಜಾಲಿಹಾಳ ಖಾದಿ ಕೇಂದ್ರದಲ್ಲೂ ರಾಷ್ಟ್ರಧ್ವಜದ ನೂಲು, ಬಟ್ಟೆಯನ್ನು ತಯಾರಿಸಲಾಗುತ್ತಿದೆ. ತುಳಸಿಗೇರಿಯಲ್ಲಿ ವರ್ಷಕ್ಕೆ ೩೦,೦೦೦ ಮೀಟರ್ ಬಟ್ಟೆ ತಯಾರಾಗಿ ಹುಬ್ಬಳ್ಳಿಯ ಬೆಂಗೇರಿಗೆ ಕಳುಹಿಸಿ ಕೊಡಲಾಗುತ್ತಿದೆ.ಹೆಚ್ಚು ಶ್ರಮ:
ಸದಾ ಖಾದಿ ಬಟ್ಟೆ ಚರಕದಿಂದ ಒಂದು ಎಳೆಯಾಗಿ ಹೊರ ಬರುತ್ತದೆ. ಆದರೆ ಧ್ವಜದ ಬಟ್ಟೆ ಚರಕದಿಂದ ಎರಡೆಳೆ ಹುರಿಯಾಗಿ ಬರುತ್ತದೆ. ಬನ್ನಿ ಕಾಟನ್, ಜೈಗರ ತಳಿಯ ಹತ್ತಿಯಿಂದ ತಯಾರಿಸಿದ ದಾರದಿಂದ ನೇಯ್ಗೆ ಮಾಡಿದ ಬಟ್ಟೆಯಿಂದ ತಯಾರಾಗಿರುತ್ತದೆ. ಇದರ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಇದಕ್ಕೆ ಹೆಚ್ಚು ಶ್ರಮ ವಹಿಸಬೇಕು. ಅಂದಾಗ ಮಾತ್ರ ಈ ಬಟ್ಟೆ ತಯಾರಾಗುತ್ತದೆ.----
ಜನಪ್ರತಿನಿಧಿಗಳ ನಿರ್ಲಕ್ಷ್ಯ:ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ತಯಾರಾದ ಬಟ್ಟೆಯಿಂದ ನಮ್ಮ ರಾಷ್ಟ್ರದಲ್ಲಿ ರಾಷ್ಟ್ರಧ್ವಜ ಹಾರಾಡುವುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಈ ಖಾದಿ ಕೇಂದ್ರಕ್ಕೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿನೂ ಭೇಟಿ ನೀಡಿ ಮೂಲಭೂತ ಸೌಲಭ್ಯಕ್ಕೆ ಮತ್ತು ಅಭಿವೃದ್ಧಿಗೆ ಈ ಕೇಂದ್ರಕ್ಕೆ ಅನುದಾನ ಇಲ್ಲಿಯವರಗೆ ಯಾರು ನೀಡಿಲ್ಲ. ರಾಜಕೀಯವಾಗಿ ಮಾತ್ರ ದೇಶಾಭಿಮಾನ, ದೇಶಕ್ಕೆ ಅವಮಾನ ಎಂದು ಮಾತಾಡುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಆದರೂ ಇವರ‍್ಯಾರಿಗೂ ಖಾದಿ ಕೇಂದ್ರದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಮನಸ್ಸು ಇಲ್ಲ.
--------ಕೋಟ್
೨೦೧೩-೨೪ ಮತ್ತು ಈ ಹಿಂದಿನ ಮೂರು ವಷರ್ದಿಂದ ರಾಜ್ಯ ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಇನ್ನೂ ಬಂದಿಲ್ಲ. ಇಡೀ ಕರ್ನಾಟಕದ್ದು ಒಟ್ಟು ₹೧೨೫ ಕೋಟಿ ಪ್ರೋತ್ಸಾಹ ಧನ ಬರಬೇಕಾಗಿದೆ. ಇದರಲ್ಲಿ ಕರ್ನಾಟಕ ಗ್ರಾಮೋದ್ಯೋಗ ಫೆಡರೇಶನ್ ಹುಬ್ಬಳ್ಳಿ ಬೆಂಗರೀಗೆ ೨ ಕೋಟಿ ೨೫ ಲಕ್ಷ ಬರಬೇಕು.-ಎಸ್.ಎಸ್.ಮಠಪತಿ, ಕಾರ್ಯದರ್ಶಿ, ಖಾದಿಗ್ರಾಮೋದ್ಯೋಗ ಸಂಯುಕ್ತ ಫೆಡರೇಶನ್ ಹುಬ್ಬಳ್ಳಿ ಬೆಂಗೇರಿ
---ಒಂದು ಲಡಿ ನೂಲಿಗೆ ₹೩ ರಾಜ್ಯ ಸರಕಾರ ಅನುದಾನ ನೀಡುತ್ತದೆ. ಒಂದು ಮೀಟರ್ ಬಟ್ಟೆಗೆ ರಾಜ್ಯ ಸರಕಾರ ₹೭ ಅನುದಾನ ನೀಡುತ್ತದೆ. ಇದು ಸಹಿತ ಸರಿಯಾದ ಕಾಲಕ್ಕೆ ಸಿಗುತ್ತಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ.
-ಕಲ್ಪನಾ ಮಮದಾಪೂರ ಬಟ್ಟೆ ನೇಯ್ಗೆ ಮಾಡುವ ಮಹಿಳೆ