ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಲಿಂ.ಮುದ್ನಾಳರ ಕೊಡುಗೆ ಅಪಾರ: ಸಚಿವ ದರ್ಶನಾಪೂರ

| Published : Feb 24 2024, 02:31 AM IST

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಲಿಂ.ಮುದ್ನಾಳರ ಕೊಡುಗೆ ಅಪಾರ: ಸಚಿವ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಮುದ್ನಾಳ ಕ್ರಾಸ್ ಹತ್ತಿರ ಮುದ್ನಾಳ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಅವರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ ಅವರ ಕೊಡುಗೆ ಅಪಾರ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ಮುದ್ನಾಳ ಕ್ರಾಸ್ ಹತ್ತಿರ ಮುದ್ನಾಳ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಅವರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ನಂತರ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ತಂದೆ, ಮಾಜಿ ಸಚಿವ ದಿ.ಬಾಪುಗೌಡ ಜೊತೆಗೂಡಿ ಮುದ್ನಾಳ್‌ ಅವರು ಜನತಾ ಪರಿವಾರದಲ್ಲಿಯೇ ಸುದೀರ್ಘ ರಾಜಕಾರಣ, ಸಾಮಾಜಿಕ, ಶೈಕ್ಷಣಿಕ, ಪರೋಪಕಾರಿ ಕಾರ್ಯಗಳನ್ನು ಮಾಡಿಕೊಂಡು ಬರುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರು ಮಾಡಿರುವ ಒಳ್ಳೆಯ ಕೆಲಸಗಳ ಪರಿಣಾಮ ನಾವೂ ರಾಜಕೀಯದಲ್ಲಿ ಗೌರಯುತವಾಗಿ ಜನರ ಮಧ್ಯೆ ಸೇವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಲವಾರು ದಶಕಗಳ ಹಿಂದೆ ನೇರನುಡಿ, ನಿಷ್ಟುರವಾದಿಯಾಗಿದ್ದ ಮುದ್ನಾಳರು, ಸಮಾನ ಮನಸ್ಕ ನಾಯಕರಾದ ವೈಜನಾಥ ಪಾಟೀಲ್, ವಿದ್ಯಾಧರ ಗುರೂಜೀ, ಹಣಮಂತರಾವ್ ದೇಸಾಯಿಯವರ ಜೊತೆಗೂಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರ ಸರ್ಕಾರ ಸಂವಿಧಾನದ 371ಜೆ ಕಲಂ ತಿದ್ದುಪಡಿ ತರಲೇಬೇಕು ಎಂದು ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಸಭೆ ಮಾಡಿ, ವಾಸ್ತವಿಕ ಪರಿಸ್ಥಿತಿಗಳನ್ನು ಜನರಿಗೆ ಹಾಗೂ ಸರ್ಕಾರಕ್ಕೆ ತಿಳಿಸುವ ಕಾರ್ಯ, ಹೋರಾಟ ಮಾಡಿದ ಪರಿಣಾಮ ಪರಿಸ್ಥಿತಿ ಅರಿತ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ತಿದ್ದುಪಡಿ ತಂದರು. ಪರಿಣಾಮ ಇಂದು ಸಹಸ್ರಾರು ಯುವಕರಿಗೆ ಶಿಕ್ಷಣದಲ್ಲಿ, ಉದ್ಯೋಗ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅವಕಾಶಗಳು ದೊರೆತವು ಎಂದು ಅವರ ಹೋರಾಟ ಬದುಕು ಮೆಲುಕು ಹಾಕಿದರು.

ಅಖಿಲ ಭಾರತ ವೀರಶೈವ ಸಮಾಜದ ಉಪಾಧ್ಯಕ್ಷರಾಗಿ ಅಂದಿನ ಅಧ್ಯಕ್ಷ ಡಾ. ಭೀಮಣ್ಣ ಖಂಡ್ರೆ ಹಾಗೂ ಇತರರೊಂದಿಗೆ ಕೂಡಿ, ಸಮಾಜದ ಯುವಕರಿಗೆ ಬೃಹತ್ ನಗರಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಲಿ ಎಂದು ಎಲ್ಲರೊಂದಿಗೆ ಕೂಡಿ, ಕಲಬುರಗಿ-ಹೈದ್ರಾಬಾದ್-ಬೆಂಗಳೂರು ನಗರಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪನೆ ಜೊತೆಗೆ ಸಮಾಜ ಸಂಘಟನೆಗೆ ಶ್ರಮಿಸಿ, ಬೆಂಗಳೂರಿನಲ್ಲಿ ಸಮಾಜದ ಕೇಂದ್ರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಮುದ್ನಾಳ ಅವರು ತಮ್ಮ ಜೀವಿತಾವಧಿಯಲ್ಲಿ ಭ್ರಷ್ಟಾಚಾರ ವಿರೋಧಿಯಾಗಿದ್ದರು, ಅಸ್ಪೃಶ್ಯತೆ ನಿವಾರಣೆಗೆ ಚಳುವಳಿ ಮಾಡಿದಂತಹ ಮಹಾನ್ ವ್ಯಕ್ತಿ, ನೇತಾಜಿ ಪ್ರಭಾವಕ್ಕೆ ಒಳಗಾಗಿದ್ದ ಅವರು ಈ ಭಾಗದಲ್ಲಿ ಅವರ ಜಯಂತಿ, ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಿದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ, ಮುದ್ನಾಳ ಅಭಿಮಾನಿಗಳು ಕೂಡಿ ನಮ್ಮ ತಂದೆಯವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಸಮಾರಂಭದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಎಲ್ಲಾ ಪಕ್ಷದವರು ಆಗಮಿಸಿದ್ದಾರೆ ಎಂದು ತಿಳಿಸಿದ ಅವರು, ನಮ್ಮ ತಂದೆಯವರು ಹಾಗೂ ಪರಿವಾರ ಮೊದಲಿನಿಂದಲೂ ಈ ಭಾಗದಲ್ಲಿ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಂಡು ಬಂದಿದೆ. ಅವರ ಮಾರ್ಗದರ್ಶನದಲ್ಲಿ ನಾವು ಕೂಡ ಜನರ ಮಧ್ಯೆ ಪ್ರೀತಿ, ಸಾಮರಸ್ಯದಿಂದ ಬಾಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ರಂಭಾಪುರಿಶ್ರೀಗಳು, ಅಬ್ಬೆತುಮಕೂರಿನ ಡಾ. ಗಂಗಾಧರ ಸ್ವಾಮಿಜಿ, ದೇವಾಪುರದ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ, ದೋರನಹಳ್ಳಿಯ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ನೇರಡಗಂನ ಪಂಚಮ ಸಿದ್ದಲಿಂಗ ಸ್ವಾಮಿಜಿ, ನಗರದ ದಾಸಬಾಳ ಮಠದ ವೀರೇಶ್ವರ ಸ್ವಾಮಿಜಿ, ಸಂಗಮನ ಕರುಣೇಶ್ವರ ಸ್ವಾಮಿಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ನಗರದ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮಿಜಿ, ಗೌಡಗಾಂ ಶ್ರೀಗಳು, ಕೆಂಭಾವಿಯ ಚನ್ನಬಸವ ಶಿವಾಚಾರ್ಯ ಸ್ವಾಮಿಜಿ ಉಪಸ್ಥಿತರಿದ್ದರು.

ವೇದಿಕೆ ಮೇಲೆ ಲಿಂ. ಮುದ್ನಾಳರ ಪುತ್ರಿ ಡಾ. ಇಂದಿರಾ ಎಸ್. ಪಾಟೀಲ್, ಕಲಬುರಗಿ ಸಂಸದ ಡಾ. ಉಮೇಶ ಜಾದವ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವರುಗಳಾದ ಹಾಲಪ್ಪ ಆಚಾರ್, ನರಸಿಂಹ ನಾಯಕ್‌ (ರಾಜುಗೌಡ), ಮಾಜಿ ಸಂಸದ ಬಿ.ವಿ. ನಾಯಕ, ಪಂಪಣ್ಣಗೌಡ ಮುದ್ನಾಳ, ಮಾಜಿ ಶಾಸಕರುಗಳಾದ ಗುರುನಾಥರಡ್ಡಿ ಕೊಡಂಗಲ್, ಸೋಮನಗೌಡ ಸಾಸನೂರ, ಡಾ. ವೀರಬಸವಂತರಡ್ಡಿ ಮುದ್ನಾಳ, ಬಸವನಗೌಡ ಪಾಟೀಲ್ ಬ್ಯಾಗವಾಟ, ಅಮರನಾಥ ಪಾಟೀಲ್, ಆರ್, ರುದ್ರಯ್ಯ, ಲಿಂಗಾರಡ್ಡಿ ಬಾಸರಡ್ಡಿ ನಾಲವಾರ, ನಿಂಗನಗೌಡ ದೇಸಾಯಿ, ಹಣಮಂತರಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಸನ್ನಿಗೌಡ ಪಾಟೀಲ್ ತುನ್ನೂರ ಸೇರಿದಂತೆ ಇತರರಿದ್ದರು.

ಪ್ರಾಸ್ತಾವಿಕವಾಗಿ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಲಿಂ. ವಿಶ್ವನಾಥರಡ್ಡಿ ಮುದ್ನಾಳ ನಡೆದು ಬಂದ ದಾರಿ ವಿವರಿಸಿದರು. ರಾಚನಗೌಡ ಮುದ್ನಾಳ ಸ್ವಾಗತಿಸಿದರು. ಶರಣಗೌಡ ಬಾಡಿಯಾಳ ವಂದಿಸಿದರು.