ಹುಬ್ಬಳ್ಳಿ:

ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಗ್ರಹಣದ ವೇಳೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಗ್ರಹಣದ ವೇಳೆ ಜನತೆ ಜಪ-ತಪಗಳಲ್ಲಿ ತೊಡಗಿದ್ದು ಕಂಡು ಬಂತು. ಆದರೆ, ಇಲ್ಲಿನ ಸಿದ್ಧಾರೂಢ ಮಠದಲ್ಲಿ ಮಾತ್ರ ದರ್ಶನ ಎಂದಿನಂತೆ ಇತ್ತು. ಈ ನಡುವೆ ನವಲಗುಂದ ರಾಮಲಿಂಗ ಕಾಮಣ್ಣನ ದರ್ಶನಕ್ಕೂ ಗ್ರಹಣದ ಬಿಸಿ ತಟ್ಟಲಿಲ್ಲ.

ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರದ ಸಾಯಿ ಮಂದಿರ, ಈಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ತುಳಜಾಭವಾನಿ, ಮಹಾಲಕ್ಷ್ಮಿ ದೇವಸ್ಥಾನ, ಆಂಜನೇಯ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ವಿಠ್ಠಲ ರುಕ್ಮಿಣಿ ದೇವಸ್ಥಾನ, ರಾಘವೇಂದ್ರ ಶ್ರೀ ಮಠ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ದರ್ಶನ ಭಾಗ್ಯ ದೊರೆಯಲಿಲ್ಲ. ಬೆಳಗ್ಗೆ ಪೂಜೆ-ಪುನಸ್ಕಾರ ನೆರವೇರಿಸಿ, ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 2.30ರ ನಂತರ ಕೆಲ ದೇವಸ್ಥಾನಗಳಿಗೆ ಬೀಗ ಜಡಿದು ಬಾಗಿಲು ಮುಚ್ಚಿದರೆ, ಕೆಲ ದೇವಸ್ಥಾನಗಳಲ್ಲಿ ಬಟ್ಟೆಯ ಪರದೆ ಇಳಿಬಿಟ್ಟು ದೇವರ ದರ್ಶನಕ್ಕೆ ಅವಕಾಶ ನೀಡಲಿಲ್ಲ.

ಈ ನಡುವೆ ಕೆಲ ಭಕ್ತರು ಬಟ್ಟೆ ಪರದೆಯ ಎದುರಿಗೆ ಕುಳಿತು ಜಪ-ತಪ ಮಾಡುತ್ತಿದ್ದರು. ಶ್ರೀದುರ್ಗಾ ಸಪ್ತಶತೀ ಋಷಿ ಪ್ರಜ್ಞಾ ಆಂದೋಲನದ ಸದಸ್ಯರು ಮನೆಗಳಲ್ಲಿ ದುರ್ಗಾಸಪ್ತಶತೀ ಸಂಪೂರ್ಣ ಪಾರಾಯಣ ಮಾಡಿದ್ದು ವಿಶೇಷ. ಕೆಲವರು ಮೃತ್ಯುಂಜಯ, ಗಾಯತ್ರಿ ಜಪ ಮಾಡುವಲ್ಲಿ ನಿರತರಾಗಿದ್ದರು. ಗ್ರಹಣ ಬಿಟ್ಟ ಬಳಿಕ ದೇವಸ್ಥಾನಗಳಲ್ಲಿ ಮತ್ತೆ ಪೂಜೆ-ಪುನಸ್ಕಾರ ನಡೆಸಲಾಯಿತು. ಇನ್ನು ಮನೆಗಳಲ್ಲಿ ಸ್ನಾನಾದಿಗಳನ್ನು ಪೂರೈಸಿ ದೇವರ ಪೂಜೆ ಪುನಸ್ಕಾರ ನಡೆಸಿದ್ದು ವಿಶೇಷ.ಗ್ರಾಮದೇವಿ ಜಾತ್ರೆಗೆ ತಟ್ಟಿದ ಗ್ರಹಣ

ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೂ ಕೇತುಗ್ರಸ್ತ ಚಂದ್ರ ಗ್ರಹಣದ ಬಿಸಿ ತಟ್ಟಿದೆ. ಮಿಶ್ರಿಕೋಟಿ ಹಾಗೂ ಚವರಗುಡ್ಡ ಗ್ರಾಮಗಳಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆ ನಡೆಯುತ್ತಿದೆ. ಮಾರ್ಚ್‌ 1ರಿಂದಲೇ ಜಾತ್ರೆ ಆರಂಭವಾಗಿದೆ. ಮಂಗಳವಾರ ಚಂದ್ರಗ್ರಹಣ ಇರುವ ಕಾರಣ ಗ್ರಾಮದೇವಿ ಪೂಜಾ ಕೈಂಕರ್ಯಗಳನ್ನು ಮಧ್ಯಾಹ್ನ 3 ಗಂಟೆಯಿಂದ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಗ್ರಹಣ ಬಿಟ್ಟ ಬಳಿಕ ಯಥಾಪ್ರಕಾರ ದ್ಯಾವವ್ವ ಹಾಗೂ ದುರ್ಗವ್ವ ದೇವಿಯರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು. ಆರೂಢರ ಮಠದಲ್ಲಿ ಎಂದಿನಂತೆ ದರ್ಶನ


ಈ ನಡುವೆ ಅದ್ವೈತ ಸಿದ್ಧಾಂತ ಪರಿಪಾಲನೆಯಾಗುವ ಸಿದ್ಧಾರೂಢ ಮಠದಲ್ಲಿ ಅಜ್ಜನ ದರ್ಶನಕ್ಕೆ ಮಾತ್ರ ಯಾವುದೇ ಬಗೆಯ ಗ್ರಹಣದ ಬಿಸಿ ತಟ್ಟಲಿಲ್ಲ. ಎಂದಿನಂತೆ ಅಜ್ಜನ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಪ್ರಸಾದವೂ ಎಂದಿನಂತೆ ಇತ್ತು. ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಅಜ್ಜನ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದ ದೃಶ್ಯ ಕಂಡು ಬಂತು. ಇನ್ನು ಮಠದಲ್ಲಿ ನಿರಂತರವಾಗಿ ನಡೆಯುವ ಓಂ ನಮಃ ಶಿವಾಯ ಮಂತ್ರ ಮುಂದುವರಿದಿತ್ತು. ಕೆಲ ಭಕ್ತರು ಗ್ರಹಣದ ಕಾಲದಲ್ಲಿ ಮಠದಲ್ಲಿ ಜಪದಲ್ಲಿ ನಿರತರಾಗಿದ್ದರು.