ಕನ್ನಡಪ್ರಭ ವಾರ್ತೆ ವಿಜಯಪುರ

ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿರುವ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ನಗರದ ಹಾಸೀಂಪೀರ್‌ ದರ್ಗಾ ಮತ್ತು ಅರ್ಕಟ್ ದರ್ಗಾ ಹಾಗೂ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾದ‌ ಹಾಸೀಂಪೀರ ದರ್ಗಾ ಮತ್ತು‌ ಅರ್ಕಟ್ ದರ್ಗಾಗಳಿಗೆ ಭೇಟಿ ನೀಡಿ, ನಾಡಿನ ಎಲ್ಲ ಜನತೆಯ ಒಳಿತು, ಶಾಂತಿ, ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೂಫಿ ಸಂತರು ತಮ್ಮ ಪ್ರೀತಿ, ಕರುಣೆ, ಸಹಿಷ್ಣುತೆ ಮತ್ತು ಮಾನವೀಯತೆಯ ಸಂದೇಶಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸರ್ವಧರ್ಮ ಸಮಭಾವ ಮತ್ತು ಭ್ರಾತೃತ್ವದ ಸಂದೇಶ ಸಾರುತ್ತಿವೆ‌ ಎಂದು ಹೇಳಿದರು.

ಹಾಸಿಂಪೀರ್‌ ದರ್ಗಾ ಭೇಟಿ‌ ಸಂದರ್ಭದಲ್ಲಿ ಹಾಸಿಂಪೀರ್ ದರ್ಗಾದ ಸಯ್ಯದ್ ಮೆಹಮೂದ್ ಹುಸೇನಿ ಹಾಸ್ಮಿ, ಸಯ್ಯದ್ ಮೊಯಿನುದ್ದೀನ್ ಹುಸೇನಿ ಹಾಸ್ಮಿ, ಸೈಯದ್ ಜೈನುಲ್ ಅಬಿದಿನ್ ಹಾಸ್ಮಿ, ಸೈಯದ್ ವಾಜೇದಪಿರಾಂ ಹಾಸ್ಮಿ, ಮುಖಂಡರಾದ ಜಮೀರ್ ಭಕ್ಷಿ, ಶಕೀಲ್ ಬಾಗಮಾರೆ ಇತರರು ಉಪಸ್ಥಿತರಿದ್ದರು.

ಬಳಿಕ ಅರ್ಕಾಟ್ ದರ್ಗಾ ಭೇಟಿ ಸಂದರ್ಭದಲ್ಲಿ‌ ಅರ್ಕಾಟ್ ದರ್ಗಾದ ಸಜ್ಜಾದೆ ಡಾ.ಸೈಯ್ಯದ್‌ ಶಾ ತಕಿಪಿರಾಂ ಹುಸೇನಿ, ಸಯ್ಯದ್‌ ಶಾ ಇಕ್ಬಾಲ್ ಪೀರಾಂ ಹುಸೇನಿ, ಸೈಯ್ಯದ್‌ ಶಾ ಅಲಿ ಪೀರಾಂ ಹುಸೇನಿ, ಮುಖಂಡರಾದ ಮೊಹ್ಮದ್ ರಫೀಕ್ ಟಪಾಲ್, ರಫೀಕ್ ಅಹ್ಮದ್ ಕಾಣೆ, ಅಬ್ದುಲ್ ರಜಾಕ್ ಹೊರ್ತಿ, ಎಂ.ಸಿ. ಮುಲ್ಲಾ, ಅಶ್ಪಾಕ್ ಮನಗೂಳಿ ಇತರರು ಉಪಸ್ಥಿತರಿದ್ದರು.


ನಂತರ ವಿಜಯಪುರ ನಗರದ ಐತಿಹಾಸಿಕ ಮತ್ತು ಪ್ರಸಿದ್ಧ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರದ ಮತ್ತು ಜಿಲ್ಲೆಯ ಗುರು-ಹಿರಿಯರು ಹಾಗೂ ದೇವಾಲಯದ ಪದಾಧಿಕಾರಿಗಳು ಪ್ರೀತಿ, ವಿಶ್ವಾಸ ಹಾಗೂ ಅಭಿಮಾನದಿಂದ ಗೌರವಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಈ ದೇವಾಲಯ ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿದ್ದು, ವಿಶಿಷ್ಟ ವಾಸ್ತುಶಿಲ್ಪ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ ನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಸಿದ್ದೇಶ್ವರರ ಕೃಪಾಶೀರ್ವಾದದಿಂದ ನಾಡಿನಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಅಭಿವೃದ್ಧಿ ಮತ್ತು ಜನಕಲ್ಯಾಣದ ಕಾರ್ಯಗಳು ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಮೇಯರ್‌ ಎಂ.ಎಸ್. ಕರಡಿ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗು ಸಜ್ಜನ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಶಿವಾನಂದ, ಸುಧೀರ ಚಿಂಚಲಿ, ರಮೇಶ ಹಳ್ಳದ, ಮಲ್ಲೆಶಪ್ಪ ಗಣಿಯಾರ, ಸದಾಶಿವ ಗುಡ್ಡೋಡಗಿ ಉಪಸ್ಥಿತರಿದ್ದರು.

---

ಚಿತ್ರ: 07bij01

ಬರಹ: ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಎಂ.ಬಿ.ಪಾಟೀಲ ಭೇಟಿ ನೀಡಿದರು.