ಸಾರಾಂಶ
ಮರಿಯಮ್ಮನಹಳ್ಳಿ: ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ನಿರಂಜನ ಶ್ರೀಗಳು, ಕೊಟ್ಟೂರು ಬಸವಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಗರಗ ನಾಗಲಾಪುರ ಒಪ್ಪತ್ತೇಶ್ವರಸ್ವಾಮಿ ಮಠದ ಉತ್ತರಾಧಿಕಾರಿ ನಿರಂಜನಪ್ರಭು ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಮಾ. 15ರಂದು ಜಿ. ನಾಗಲಾಪುರ ಒಪ್ಪತ್ತೇಶ್ವರ ಮಠದಲ್ಲಿ ನಡೆಯಲಿದೆ ಎಂದು ಮುಖಂಡ ಎಚ್.ಎಂ. ಚಂದ್ರಶೇಖರಯ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾ. 15ರಂದು ಬ್ರಾಹ್ಮಿ ಮುಹೂರ್ತದಲ್ಲಿ ಷಟ್‌ಸ್ಥಲ ಬ್ರಹ್ಮೋಪದೇಶ ನಡೆಯಲಿದೆ. ಸುವರ್ಣಗಿರಿ ವಿರಕ್ತಮಠ ವಳಬಳ್ಳಾರಿಯ ಸಿದ್ದಲಿಂಗ ಸ್ವಾಮಿಗಳು, ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ನಿರಂಜನ ಶ್ರೀಗಳು, ಕೊಟ್ಟೂರು ಬಸವಲಿಂಗ ಸ್ವಾಮಿಗಳ ಅನುಮತಿ ಮೇರೆಗೆ ನಿರಂಜನಪ್ರಭು ದೇಶಿಕರ ನಿರಂಜನ ದೀಕ್ಷೆ ಅನುಗ್ರಹಿಸಿ ಶ್ರೀಮನ್ ನಿರಂಜನ ಪ್ರಣವಸ್ವರೂಪ ನಿರಂಜನಪ್ರಭು ಸ್ವಾಮಿಗಳು ಎಂದು ಪಟ್ಟಾಧಿಕಾರ ನೀಡಲಿದ್ದಾರೆ ಎಂದರು. ಮಾ. 1ರಿಂದ ಯಡೆಯೂರು ಸಿದ್ಧಲಿಂಗೇಶ್ವರ ಪುರಾಣದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡು 13 ದಿನಗಳ ಕಾಲ ನಡೆಯಲಿದೆ. ಸಂಜೆ ಯಡೆಯೂರು ಸಿದ್ದಲಿಂಗೇಶ್ವರ ಪುರಾಣ ಮಂಗಲೋತ್ಸವವಾಗಲಿದೆ. ಮಾ. 13ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ಮಾ. 14ರಂದು ಬೆಳಗ್ಗೆ 10 ಗಂಟೆಗೆ 3001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ರೈತಗೋಷ್ಠಿ ವಿಚಾರ ಸಂಕಿರಣ ನಡೆಯಲಿದೆ ಎಂದರು.ಮುಖಂಡರಾದ ಎಚ್.ಎಂ. ಮಧುರಚನ್ನ ಶಾಸ್ತ್ರೀ, ಗಂಡಿ ಬಸವರಾಜ, ಹುಲುಮನಿ ಕೊಟ್ರೇಶ್, ಎಂ. ಕಣಿಮೆಪ್ಪ, ಡಿ. ಗಜೇಂದ್ರ ನಾಯಕ ಮಾತನಾಡಿದರು. ಗರಗ ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ಮಠದ ಉತ್ತರಾಧಿಕಾರಿ ನಿರಂಜನಪ್ರಭು ದೇಶಿಕರು, ಮುಖಂಡರಾದ ಗುರಿಕಾರ್ ಸತೀಶ್, ಲಕ್ಷ್ಮಣ, ಅವಳಿ ತೋಟೇಶ್, ಎರ್ರಿಸ್ವಾಮಿ, ಸೋಮಣ್ಣ, ಮಂಜುನಾಥ ಗೌಡ, ಬ್ಯಾಲಕುಂದಿ ರಮೇಶ್, ಶಿಕ್ಷಕ ಶರಣ ಎಸ್. ಚರೇದ ಉಪಸ್ಥಿತರಿದ್ದರು.